ಬೆಂಗಳೂರು: ಕೊರೊನಾ ಸೋಂಕಿತರಿಗಾಗಿ ಖಾಸಗಿ ಆಸ್ಪತ್ರೆಗಳು ನೀಡಿರುವ ಬೆಡ್ ಸೌಲಭ್ಯ ಸೇರಿದಂತೆ ಅಗತ್ಯ ಚಿಕಿತ್ಸೆಗಳ ಕುರಿತಂತೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ತಂಡ ಭೇಟಿ ಮಾಡಿ ತಪಾಸಣೆ ನಡೆಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸ್ಥಿತಿಗತಿ ಕುರಿತಂತೆ ಪರಿಶೀಲಿಸಲು ರಾಜ್ಯ ಸರ್ಕಾರ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಒಳಗೊಂಡ ತಂಡ ರಚನೆ ಮಾಡಿದೆ. ಅಲೋಕ್ ಕುಮಾರ್ ಅವರ ನೇತೃತ್ವದ ತಂಡ ನಗರ ಪೂರ್ವ ವಿಭಾಗದ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ವಹಿಸಿದೆ. ಈ ಭಾಗದಲ್ಲಿ ಬರುವ ಮಣಿಪಾಲ್, ಚಿನ್ಮಯ್, ಜನಪ್ರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅಂಬೇಡ್ಕರ್ ಮೆಡಿಕಲ್ ಕಾಲೇಜು, ಬ್ಯಾಪಿಸ್ಟ್ ಆಸ್ಪತ್ರೆ ಹಾಗೂ ಸೇಂಟ್ ಫಿಲೋಮಿನಾ ಸೇರಿದಂತೆ ಏಳು ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿತು.
ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗಾಗಿ ಮೀಸಲಿರಿಸಿರುವ ಬೆಡ್ಗಳ ಬಗ್ಗೆ ಮಾಹಿತಿ ಪಡೆಯಿತು. ಶೇ.50ರಷ್ಟು ಹಾಸಿಗೆಗಳು ಕೊರೊನಾ ರೋಗಿಗಳಿಗಾಗಿ ಮೀಸಲಿರಿಸಬೇಕೆಂದು ಸೂಚನೆ ನೀಡಲಾಯಿತು.
ಅಲ್ಲದೇ, ನಿತ್ಯ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ, ಡಿಸ್ಚಾರ್ಜ್ ಆದವರು, ಬೆಡ್ಗಳ ಲಭ್ಯತೆ ಹಾಗೂ ದರಗಳ ಪಟ್ಟಿಯ ಫಲಕವನ್ನು ಆಸ್ಪತ್ರೆಯ ಪ್ರವೇಶದ್ವಾರದಲ್ಲೇ ಹಾಕಬೇಕು. ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಸಿದರು.