ಬೆಂಗಳೂರು : ಮಾದಕವಸ್ತು ಸರಬರಾಜು ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ತನ್ನನ್ನು ಬಂಧಿಸಬಹುದು ಎಂದು ಮೊದಲೇ ಊಹಿಸಿದ್ದ ನಟಿ ರಾಗಿಣಿ ದ್ವಿವೇದಿ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಸಂಬಂಧ ವಿಚಾರಣೆಗೆ ಸೆಪ್ಟೆಂಬರ್ 3ರಂದೇ ಹಾಜರಾಗುವಂತೆ ನಟಿ ರಾಗಿಣಿ ಅವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ, ನಿನ್ನೆ ವಿಚಾರಣೆಗೆ ಹಾಜರಾಗದ ನಟಿ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಆದರೆ, ಪೊಲೀಸರು ನಟಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿದ್ದರು.
ಈ ಹಿನ್ನೆಲೆ ಬಂಧನಕ್ಕೊಳಗಾಗುವ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಗರದ 34ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ರಾಗಿಣಿ. ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ್ದ ಕೋರ್ಟ್ ಸಿಸಿಬಿಗೆ ನೋಟಿಸ್ ಮಾಡಿ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತ್ತು. ಇದೀಗ ನಟಿ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಅನೂರ್ಜಿತಗೊಳ್ಳಲಿದ್ದು, ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿದೆ.