ಬೆಂಗಳೂರು : ಸ್ಯಾಂಡಲ್‌ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ತಮ್ಮ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ 1 ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಬ್ರಾಹ್ಮಣ್ಯದ ಕುರಿತಂತೆ ನಟ ಚೇತನ್ ಜೂನ್ 6ರಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ನಟ ಚೇತನ್ ವಿರುದ್ಧ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿಹಾಯ್ದಿದ್ದರು. ಜತೆಗೆ, ಚೇತನ್ ಬಂಧಿಸುವಂತೆ ಒತ್ತಾಯಿಸಿದ್ದರು. ಶಿವರಾಮ್ ಹೆಬ್ಬಾರ್ ಅವರ ಹೇಳಿಕೆಗಳು ನನ್ನ ತೇಜೋವಧೆ ಮಾಡಿದೆ ಎಂದು ಆರೋಪಿಸಿ ನಟ ಚೇತನ್ ಮಾನನಷ್ಟ ದಾವೆ ಹೂಡಿದ್ದಾರೆ.
ಚೇತನ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸಿದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಜೂನ್ 24ರಂದು ಸಚಿವರಿಗೆ ತುರ್ತು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದ್ದಾರೆ.
ನಟ ಚೇತನ್ ಸಲ್ಲಿಸಿರುವ ಅರ್ಜಿಯಲ್ಲಿ, ತಾನು ಓರ್ವ ನಟನಷ್ಟೇ ಅಲ್ಲ. ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳು, ಮಹಿಳೆಯರು ಸೇರಿದಂತೆ ಧಮನಿತ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟಗಳಲ್ಲಿ, ಸಮಾವೇಶಗಳಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತನೂ ಹೌದು. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೆರಿಯಾರ್ ಅವರು ಬ್ರಾಹ್ಮಣ್ಯದ ಕುರಿತು ಮಾಡಿದ್ದ ವಿಮರ್ಶೆಯನ್ನು ಟ್ವೀಟ್ ಮಾಡಿದ್ದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಪವನ್ ಕುಮಾರ್ ಶರ್ಮಾ ಎಂಬುವರು ನನ್ನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್ 153ಬಿ ಹಾಗೂ 295ಎ ಅಡಿ ಎಫ್ಐಆರ್ ದಾಖಲಿಸಿದ್ದಾರೆ. ಬಳಿಕ ಸಚಿವರಾದ ಶಿವರಾಮ್ ಹೆಬ್ಬಾರ್ ನನ್ನ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ನನ್ನ ಹೆಸರಿಗೆ, ಗೌರವಕ್ಕೆ, ಪ್ರಾಮಾಣಿಕತೆ ಸಾರ್ವಜನಿಕವಾಗಿ ಹಾನಿ ಉಂಟುಮಾಡಿದ್ದಾರೆ ಎಂದು ನಟ ಚೇತನ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: MAA ಚುನಾವಣೆಯಲ್ಲಿ ಪ್ರಕಾಶ್ ರೈ ಸ್ಪರ್ಧೆಗೆ ಅಪಸ್ವರ.. ಅದಕ್ಕೆ ಯೂನಿವರ್ಸಲ್ ನಟ ಹೀಗಂತಾರೆ..
ನಟ ಚೇತನ್ ಕೋರ್ಟ್ ಮುಂದಿಟ್ಟ ಬೇಡಿಕೆಗಳು
ಮಾನನಷ್ಟ ಮೊಕದ್ದಮೆ ಹೂಡಿರುವ ನಟ ಚೇತನ್ ಮೂರು ಮನವಿಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.
* ಮಾನಹಾನಿ ಮಾಡಿರುವ ಹೆಬ್ಬಾರ್ ರಿಂದ 1 ರೂ. ಅಥವಾ ನ್ಯಾಯಾಲಯಕ್ಕೆ ಸೂಕ್ತವೆನ್ನಿಸಿದ ಪರಿಹಾರ ಕೊಡಿಸಬೇಕು
* ಅವಹೇಳನಕಾರಿ ಪದಗಳನ್ನು ಬಳಿಸಿರುವುದಕ್ಕೆ ಅದೇ ಟ್ವಿಟರ್‌ನಲ್ಲಿ ಬೇಷರತ್ ಕ್ಷಮೆ ಕೋರಲು ನಿರ್ದೇಶಿಸಬೇಕು
* ನನ್ನ ಅಥವಾ ನನ್ನ ಕುಟುಂಬದ ವಿರುದ್ಧ ಮಾನಹಾನಿ ಪೋಸ್ಟ್, ಪ್ರಸಾರ ಮಾಡದಂತೆ ಹೆಬ್ಬಾರ್ ಮತ್ತವರ ಏಜೆಂಟರಿಗೆ ಶಾಶ್ವತ ನಿರ್ಬಂಧಕಾಜ್ಞೆ ವಿಧಿಸಬೇಕು
ಸಚಿವ ಶಿವರಾಮ್ ಹೆಬ್ಬಾರ್ ಮಾಡಿದ್ದ ಟ್ವೀಟ್
ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿದ್ದು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದ್ದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು.
ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜಿ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಚಿವ ಹೆಬ್ಬಾರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.