ಬೆಂಗಳೂರು: ಅನ್ಯ ಕಾರ್ಯದ ನಿಮಿತ್ತ ಹೊರ ಹೋಗಲು ಯತ್ನಿಸಿದ ಮಾಲೂರು ಶಾಸಕ ನಂಜೇಗೌಡ ಅವರನ್ನು ಕಾರ್ಯಕರ್ತರು ತಡೆದ ಪ್ರಸಂಗ ತಾಜ್ ವಿವಾಂತ್ ಹೋಟೆಲ್ ಮುಂಭಾಗ ನಡೆದಿದೆ.
ಇಂದು ಶಾಸಕ ನಂಜೇಗೌಡರು, ತಾಜ್ ವಿವಾಂತ್ ಹೋಟೆಲ್ನಿಂದ ಪಕ್ಷದ ನಾಯಕರ ಸೂಚನೆ ಮೇರೆಗೆ ಕಾರ್ಯನಿಮಿತ್ತ ಹೊರ ಹೋಗಲು ಬಂದರು. ಆದರೆ ಈ ವೇಳೆ ಹೋಟೆಲ್ ಮುಂಭಾಗ ನಿಂತಿದ್ದ ಕಾರ್ಯಕರ್ತರು ಕಾರಿಗೆ ಅಡ್ಡ ನಿಂತು ತಡೆದರು. ಹೊರಹೋಗಿ ಬರುತ್ತೇನೆ ಅಂದರೂ ಕಾರ್ಯಕರ್ತರು ಬಿಡಲಿಲ್ಲ. ಹೋಗದಂತೆ ಒತ್ತಡ ಹಾಕಿ ತಡೆದ ಕಾರ್ಯಕರ್ತರು ಹೋಟೆಲ್ನ ಗೇಟು ಹಾಕಿದರು. ಹೀಗೆ ಕೆಲ ನಿಮಿಷಗಳ ಕಾಲ ಹೋಟೆಲ್ ಮುಂದೆ ಹೈಡ್ರಾಮ ನಡೆಯಿತು. ಅದಾಗ್ಯೂ ಹಲವರ ಮನವೊಲಿಕೆಯ ನಂತರ ಶಾಸಕರು ಹೊರಗೆ ತೆರಳಿದರು.
ಇವರು ಹೊರಟದ್ದು ಎಲ್ಲಿಗೆ, ಕಾರ್ಯಕರ್ತರು ತಡೆದಿದ್ದು ಏಕೆ? ಯಾರನ್ನು ಭೇಟಿಯಾಗಲು ತೆರಳಿದ್ದರು? ವಾಪಸ್ ಬರುತ್ತಾರಾ? ಆಪರೇಷನ್ ಕಮಲಕ್ಕೆ ತುತ್ತಾಗಿದ್ದರಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.