ಬೆಂಗಳೂರು: ಅಧಿಕಾರ ಪ್ರಭಾವ ಬಳಸಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಂದು ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ 15 ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿ ಸೇರಿದಂತೆ 60 ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಚುರುಕುಗೊಳಿಸಿದ್ದಾರೆ.
ಮೂವರು ಎಸ್ಪಿಗಳ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ವಿಶೇಷ ತಂಡಗಳಾಗಿ ಪ್ರತ್ಯೇಕ ಕಡೆಗಳಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಹಲವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿಪತ್ರಗಳು ಪತ್ತೆಯಾಗಿವೆ. ದಾಳಿ ವೇಳೆ ದೊರೆತ ಚಿನ್ನಾಭರಣಗಳ ಮೂಲದ ಬಗ್ಗೆ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ.
ಈ ವೇಳೆ ಅಕ್ರಮ ಆಸ್ತಿ ಗಳಿಕೆ ದಾಖಲೆಗಳ ಲಭ್ಯವಾಗಿವೆ. ಅಕ್ರಮ ಹಾಗು ದಾಖಲೆಯಿಲ್ಲದ ಹಣ ದಾಳಿ ನಡೆಸಿದವರ ಮನೆಗಳಲ್ಲಿ ಕೆ.ಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಗದಗದಲ್ಲಿ ಕೆಲಸ ಮಾಡುತ್ತಿರುವ ಟಿ.ಎಸ್. ರುದ್ರೇಶಪ್ಪ ಮನೆಯಲ್ಲಿ ಅಂದಾಜು 3.5 ಕೋಟಿ ರೂ. ಮೌಲ್ಯದ 7 ಕೆ.ಜಿ ಚಿನ್ನ ಹಾಗೂ 15 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬಿಬಿಎಂಪಿ ಎಫ್ಡಿಎ ಆಪ್ತರ ಮನೆ ಮೇಲೆಯೂ ದಾಳಿ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಎಫ್ಡಿಎ ಅಗಿರುವ ಮಾಯಣ್ಣ ಆಪ್ತರ ಮನೆ ಮೇಲೆಯೂ ದಾಳಿಯಾಗಿದೆ. ಮಾಯಣ್ಣನ ಹೆಂಡತಿ ವಿಜಯಲಕ್ಷ್ಮಿ ಹೆಸರಲ್ಲಿ ಬೆಲೆಬಾಳುವ ಬೆನ್ಜ್ ಹಾಗೂ ಇನ್ನೋವಾ ಕಾರಿದೆ. ಮಾಯಣ್ಣ ಮತ್ತೊಂದು ಕಾರಿನಲ್ಲಿ ಮಾತ್ರ ಓಡಾಡಿಕೊಂಡಿದ್ದರು. ಕುಣಿಗಲ್, ಮಾಗಡಿ, ಬೆಂಗಳೂರು ಸೇರಿದಂತೆ ಹತ್ತಾರು ಕಡೆ 20ಕ್ಕೂ ಹೆಚ್ಚು ಕಡೆ ಆಸ್ತಿ ಹೊಂದಿರುವ ಬಗ್ಗೆ ದಾಖಲೆ ದೊರೆತಿದೆ ಎಂದು ಹೇಳಲಾಗ್ತಿದೆ.
ಅದೇ ರೀತಿ ದಾಳಿಗೊಳಗಾದ ರಾಜ್ಯದ ವಿವಿಧ ಅಧಿಕಾರಿಗಳ ಮನೆ ಹಾಗೂ ಆಪ್ತರ ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿವೆ. ಈ ಬಗ್ಗೆ ಎಸಿಬಿ ದಾಳಿ ಮುಂದುವರೆಸಿದ್ದು, ಮತ್ತಷ್ಟು ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ಅಧಿಕೃತವಾಗಿ ಬಹಿರಂಗಪಡಿಸಿದ ನಂತರವೇ ತಿಳಿಯಲಿದೆ.
ಇದನ್ನೂ ಓದಿ: ACB Raid: ಗದಗ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ