ಬೆಂಗಳೂರು: ನಗರದ ವಿವಿಧ ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಖಾಸಗಿ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ಮಾಹಿತಿ ಎಸಿಬಿ ಎಸ್ಪಿ ಜೀನೆಂದ್ರ ಖಣಗಾವಿ ಅವರಿಗೆ ಬಂದಿತ್ತು. ಹೀಗಾಗಿ ಇಂದು ಬ್ಯಾಟರಾಯನಪುರದ ಉಪ ನೋಂದಣಾಧಿಕಾರಿ ಕಚೇರಿ, ಚಿಕ್ಕಜಾಲ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ಮಾಡಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಖಾಸಗಿ ಏಜೆಂಟ್ರ ಮುಖಾಂತರ ಸಾರ್ವಜನಿಕರಿಂದ ಸರ್ಕಾರದ ಕೆಲಸ ಕಾರ್ಯಗಳಿಗೆ ಲಂಚದ ಹಣ ಪಡೆದಿರುವ ವಿಚಾರ ಬಯಲಿಗೆ ಬಂದಿದೆ ಎನ್ನಲಾಗಿದೆ.
ಸದ್ಯ ಮಧ್ಯವರ್ತಿಗಳಾದ ಚೇತನ್, ಸುಭಾಷ್, ಮಂಜುನಾಥ್, ಲಕ್ಷ್ಮೀನಾರಾಯಣ್ ಎಂಬುವವರನ್ನ ವಶಕ್ಕೆ ಪಡೆದು, ಕಚೇರಿಯಲ್ಲಿನ ವಿವಿಧ ಬ್ಯಾಂಕಿನ ಚೆಕ್ಗಳು, ಡಿಡಿ ಮತ್ತು ಸರ್ಕಾರಿ ಸೀಲ್ಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.