ಬೆಂಗಳೂರು : ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿ ಚೀಫ್ ಎಂಜಿನಿಯರ್ ವಿರುದ್ಧ ಜಾಮೀನು ಸಹಿತ ವಾರೆಂಟ್ ಹೊರಡಿಸಿದೆ. ಅಲ್ಲದೇ, ಅಧಿಕಾರಿಯನ್ನು ಫೆ.17ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ.
ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ಕೋರಿ ಬೆಂಗಳೂರಿನ ವಿಜಯನ್ ಮೆನನ್ ಎಂಬುವರು 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ವಾದ ಮಂಡಿಸಿ, ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ಚೀಫ್ ಎಂಜಿನಿಯರ್ ಇಂದಿನ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯ ಕಾರಣ ಹಾಜರಾಗಲು ಸಾಧ್ಯವಾಗಿಲ್ಲ. ಅವರ ಹಾಜರಾತಿಗೆ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಕುರಿತು ನ್ಯಾಯಾಲಯದ ಕಲಾಪ ಆರಂಭವಾಗುವ ಮುನ್ನ ಬೆಳಗ್ಗೆಯೇ ಮೆಮೋ ಸಲ್ಲಿಸಿ ಮನವಿ ಮಾಡಬೇಕು. ಈಗ ಮನವಿ ಮಾಡಿದರೆ ಅದನ್ನು ಒಪ್ಪಲಾಗದು ಎಂದಿತು.
ಬಳಿಕ, ನಿಮ್ಮ ಬಿಬಿಎಂಪಿ ಎಂಜಿನಿಯರ್ಗಳು ಹಾಗೂ ಅಧಿಕಾರಿಗಳಿಗೆ ಜೈಲಿಗೆ ಹೋಗಲು ತಮ್ಮ ಗಂಟುಮೂಟೆ ಕಟ್ಟಿಟ್ಟುಕೊಳ್ಳಲು ಹೇಳಿ ಎಂದು ಕಟುವಾಗಿ ಹೇಳಿದ ಪೀಠ, ಚೀಪ್ ಎಂಜಿನಿಯರ್ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿ ಮಾಡಿತು.
ಇದನ್ನೂ ಓದಿ: ರಾಜ್ಯದ ಪ್ರಾಥಮಿಕ- ಪ್ರೌಢ ಶಾಲೆಗಳಲ್ಲಿ ಹಿಜಾಬ್ ಗೊಂದಲ ನಿವಾರಿಸಿ: ಕಾಂಗ್ರೆಸ್ ಉಪ ನಾಯಕ ಯು.ಟಿ.ಖಾದರ್ ಒತ್ತಾಯ
ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಪಾಲಿಕೆ ಅಧಿಕಾರಗಳ ವಿರುದ್ಧ ಫೆಬ್ರವರಿ 7ರಂದು ನಡೆದ ವಿಚಾರಣೆ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಎಸಿ ಆಫೀಸಿನಲ್ಲಿ ಕೂರುವ ನಿಮಗೆ ಜನರ ಕಷ್ಟ ಅರ್ಥವಾಗುವುದಿಲ್ಲ. ನಿಮ್ಮ ಬೇಜವಾಬ್ದಾರಿಗೆ ಜನ ರಸ್ತೆ ಗುಂಡಿಯಲ್ಲಿ ಬಿದ್ದು ಸಾಯಬೇಕೇ ಎಂದು ಪ್ರಶ್ನಿಸಿದ್ದ ಪೀಠ, ಹಾಗಾಗಲು ನಾವು ಬಿಡುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೇ ಜೈಲಿಗೆ ಕಳುಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಅಲ್ಲದೇ, ಅಸ್ಪಷ್ಟ ಮಾಹಿತಿ ನೀಡಿದ್ದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದ ಪೀಠ, ನ್ಯಾಯಾಲಯದ ಹಾದಿ ತಪ್ಪಿಸಲು ಪ್ರಯತ್ನಿಸಿದರೆ ಇಲ್ಲಿಂದಲೇ ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಪರ ವಕೀಲರ ಮನವಿ ಮೇರೆಗೆ ಸದ್ಯಕ್ಕೆ ನಿಮ್ಮ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ತಿಳಿಸಿತು. ಇದೇ ವೇಳೆ, ಮುಂದಿನ ವಿಚಾರಣೆಗೆ ರಸ್ತೆ ಗುಂಡಿ ಮುಚ್ಚುವವರ ಕುರಿತು ಸಮಗ್ರ ಕ್ರಿಯಾ ಯೋಜನೆಗಳ ಮಾಹಿತಿ ಸಹಿತ ಖುದ್ದಾಗಿ ಹಾಜರಿರಬೇಕು ಎಂದು ನಿರ್ದೇಶಿಸಿತ್ತು. ಅಧಿಕಾರಿ ಹಾಜರಾಗದಿದ್ದುದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.