ಬೆಂಗಳೂರು: ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಬಿಬಿಎಂಪಿ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಆಮ್‍ಆದ್ಮಿ ಪಾರ್ಟಿಯ ರಾಜ್ಯ ವೀಕ್ಷಕರಾದ ರೋಮಿ ಭಾಟಿ, ’’ ಕಳೆದ ಆರು ವರ್ಷಗಳ ಹಿಂದೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಮ್ಮ ಪಕ್ಷ ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದೆ. ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಮ್ಮ ಗುರಿಯನ್ನು ಸಾಧಿಸಿದ್ದೇವೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ, ಎಲ್ಲಿಯೂ ಆದಾಯ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯ ಸರಾಗವಾಗಿ ಹರಿದುಬರುತ್ತಿದೆ’’ ಎಂದರು.
ದೇಶವನ್ನು ರಕ್ಷಣೆ ಮಾಡುವುದು ನಮ್ಮ ಮೂಲ ಧ್ಯೇಯವಾಗಿದೆ. ಬಿಬಿಎಂಪಿ ಚುನಾವಣೆ ನಮ್ಮ ಮುಂದಿದೆ. ಬೂತ್ ಮಟ್ಟದಲ್ಲಿ ಜನಸಾಮಾನ್ಯರ ಬಳಿಗೆ ಹೋಗಬೇಕು. 6 ವರ್ಷಗಳಲ್ಲಿ ಆಪ್ ದೆಹಲಿಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೇ ಮಾದರಿಯನ್ನು ಮುಂದಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರವನ್ನು ಸೂಚಿಸುವಂತಹ ಕಾರ್ಯಸೂಚಿಯೊಂದಿಗೆ ಮತದಾರರ ಬಳಿಗೆ ಹೋಗಬೇಕೆಂದು ನಮ್ಮ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದ ಪರಿಣಾಮ ದೆಹಲಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಶೇ.20 ರಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ. ಅದೇ ರೀತಿ ದೆಹಲಿಯ ಶಿಕ್ಷಣ ಕ್ಷೇತ್ರದ ಫಲಿತಾಂಶ ಶೇ.98 ರಷ್ಟಾಗಿದೆ. ಇದೇ ರೀತಿಯ ಬದಲಾವಣೆಯನ್ನು ತರುವ ಕಾರ್ಯಯೋಜನೆಗಳನ್ನು ಮುಂದಿಟ್ಟು ಬೆಂಗಳೂರನ್ನು ಬದಲಾಯಿಸಬೇಕು. ಸ್ಥಳೀಯ ಮಟ್ಟದ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಬೇಕು ಎಂದರು.
ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷ ಸ್ಪರ್ಧೆ ನಡೆಸಲಿದೆ. ಈ ಚುನಾವಣೆಯಲ್ಲಿ ರೈತರ ಹಿತರಕ್ಷಣೆ ನಮ್ಮ ಆದ್ಯತೆಯಾಗಿರುತ್ತದೆ ಎಂದು ಹೇಳುವ ಮೂಲಕ ಅವರು, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಆಪ್ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ ’’ಒಂದು ವರ್ಷದ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ನಾವು ಬೆರಳೆಣಿಕೆಯಲ್ಲಿದ್ದೆವು. ಆದರೆ, ದಿನದಿಂದ ದಿನಕ್ಕೆ ಪಕ್ಷದ ಕಡೆಗೆ ಒಲವು ತೋರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು, ಕಾರ್ಯಕರ್ತರು, ಸ್ವಯಂ ಸೇವಕರು ಆಪ್ ಪಕ್ಷವನ್ನು ಸೇರುತ್ತಿದ್ದಾರೆ’’ ಎಂದರು.
ಬೆಂಗಳೂರಿನಲ್ಲಿ ಬದಲಾವಣೆ ತರಬೇಕೆಂಬ ಸಂಕಲ್ಪ ಹೊಂದಿದ್ದೇವೆ. ದೆಹಲಿ ಮಾದರಿಯ ಬದಲಾವಣೆಯನ್ನು ತರಲು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದೇವೆ. ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ್ ರಾಠೋಡ್ ಮತ್ತು ಇತರೆ ಗಣ್ಯರು ಇದ್ದರು.