ಬೆಂಗಳೂರು: ಹಿಜಾಬ್ ಕುರಿತಂತೆ ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಒಡ್ಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಮಧುರೈನ ಕೆಲವು ವ್ಯಕ್ತಿಗಳು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವುದನ್ನು ಬೆಂಗಳೂರು ವಕೀಲರ ಸಂಘ ಖಂಡಿಸುತ್ತದೆ. ಹಿಜಾಬ್ ಕುರಿತ ತೀರ್ಪಿಗೆ ಅತೃಪ್ತಿ ಇದ್ದಲ್ಲಿ ಸಂವಿಧಾನದಡಿಯಲ್ಲಿ ಮೇಲ್ಮನವಿ ಪರಿಹಾರ ಕೋರಬಹುದು. ಅದರ ಬದಲು ಕೆಲವರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವುದು ಹಾಗೂ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ ಎಂದರು.
ಎಫ್‌ಐಆರ್ ದಾಖಲು: ಈ ಪ್ರಕರಣದ ಸಂಬಂಧ ಸುಧಾ ಕಟ್ವಾ ಎಂಬ ಮಹಿಳಾ ವಕೀಲರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಮಾರ್ಚ್ 19ರಂದು 10.22ರ ಸುಮಾರಿಗೆ ಸುಧಾ ಕಾಟ್ವ ಸಹೋದ್ಯೋಗಿ ಉಮಾಪತಿ ಎಂಬ ವಕೀಲರ ವಾಟ್ಸ್‌ಆ್ಯಪ್‌ಗೆ ಸುಮಾರು ನಾಲ್ಕು ನಿಮಿಷದ ವಿಡಿಯೋ ಬಂದಿತ್ತು.
ಇದನ್ನೂ ಓದಿ: ಹಿಜಾಬ್ ವಿವಾದ: ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದವನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕೋರ್ಟ್
ವಿಡಿಯೋದಲ್ಲೇನಿತ್ತು? ತಮಿಳು ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಹಿಜಾಬ್ ತೀರ್ಪಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಏಕವಚನದಲ್ಲಿಯೇ ನಿಂದಿಸಿದ್ದಾನೆ. ಇದರ ಜೊತೆಗೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾನೆ.
ಈ ವಿಡಿಯೋ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಹಾಗೂ ವಿವಿಧ ಗುಂಪುಗಳ ಮಧ್ಯೆ ದ್ವೇಷ ಉಂಟು ಮಾಡುವ ರೀತಿಯಲ್ಲಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುಧಾ ಕಾಟ್ವ ದೂರಿನಲ್ಲಿ ಉಲ್ಲೇಖಿಸಿದ್ದರು.