ಬೆಂಗಳೂರು: ಅವಧಿ ಪೂರ್ವ ಹಾಗೂ ಸನ್ನಡತೆ ತೋರಿದ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 162 ಕೈದಿಗಳಿಗೆ ಇದೇ ಬುಧವಾರ ಬಿಡುಗಡೆ ಭಾಗ್ಯ ಸಿಗಲಿದೆ.
ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಸನ್ನಡತೆ ತೋರಿರುವ ಹಾಗೂ 142 ಶಿಕ್ಷಾಬಂಧಿಗಳು ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಪ್ರಯುಕ್ತ ಕೇಂದ್ರ ಸರ್ಕಾರ ನಿರ್ದೇಶನ ಮೇರೆಗೆ 20 ಸಜಾಬಂಧಿಗಳು ಸೇರಿದಂತೆ ಒಟ್ಟು 162 ಕೈದಿಗಳು ಬಿಡುಗಡೆಯಾಗುತ್ತಿದ್ದಾರೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಆವರಣದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಸಮಾರಂಭವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ರಾಜ್ಯದ ಏಳು ಕೇಂದ್ರ ಕಾರಾಗೃಹಗಳಿಂದ ಮಹಿಳಾ ಕೈದಿ ಸೇರಿದಂತೆ 142 ಸಜಾಬಂಧಿಗಳು ಬಿಡುಗಡೆಗೆ ರೆಡಿಯಾಗಿದ್ದು, ಬೆಂಗಳೂರು ಸೆಂಟ್ರಲ್ ಜೈಲಿನಲ್ಲೇ ಅತಿ ಹೆಚ್ಚು ಅಂದರೆ 71 ಕೈದಿಗಳು ರಿಲೀಸ್ ಆಗುತ್ತಿದ್ದಾರೆ. ಇನ್ನೂ ಮೈಸೂರು ಸೆರೆಮನೆಯಿಂದ 24, ಬೆಳಗಾವಿ 6, ಕಲಬುರಗಿ 13, ವಿಜಯಪುರ 6, ಬಳ್ಳಾರಿ 11 ಹಾಗೂ ಧಾರವಾಡ ಜೈಲಿನಿಂದ 11 ಕೈದಿಗಳು ಬಿಡುಗಡೆಯಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ಗರಿಷ್ಠ ಶಿಕ್ಷೆ ಅನುಭವಿಸಿರುವ ಹಾಗೂ 55 ವರ್ಷಗಳಿಗಿಂತ ಮೇಲ್ಪಟ್ಟ 20 ಕೈದಿಗಳು ಅಂದೇ ಬಿಡುಗಡೆಯಾಗಲಿದ್ದಾರೆ ಎಂದು ಜೈಲಾಧಿಕಾರಿ ಶೇಷವಮೂರ್ತಿ ಮಾಹಿತಿ ನೀಡಿದ್ದಾರೆ.