ಬೆಂಗಳೂರು: ತನ್ನ ಪ್ರೀತಿ ನಿರಾಕರಿಸಿದ ಗಗನಸಖಿಯ ಕಿವಿಗಳನ್ನು ಕಟ್ ಮಾಡಿ ಪರಾರಿಯಾಗಿರುವ ರೌಡಿಶೀಟರ್ನನ್ನು ಪತ್ತೆಮಾಡಲು ಈಶಾನ್ಯ ವಿಭಾಗದ ಪೋಲೀಸರು ಬಲೆ ಬೀಸಿದ್ದಾರೆ.
ಇಂಡಿಗೋ ಏರ್ಲೈನ್ಸ್ನ ಗಗನಸಖಿಯ ಕಿವಿಗಳನ್ನು ಕಟ್ ಮಾಡಿ, ಪರಾರಿಯಾಗಿರುವ ಜಾಲಹಳ್ಳಿ ಠಾಣೆ ರೌಡಿಶೀಟರ್ ಅಜಯ್ ಅಲಿಯಾಸ್ ಜಾಕಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ, ಹುಡುಕಾಟ ಆರಂಭಿಸಿದ್ದಾರೆ.
ಘಟನೆ ಹಿನ್ನೆಲೆ
ಜಾಲಹಳ್ಳಿ ನಿವಾಸಿಯಾಗಿದ್ದ ಇಂಡಿಗೋ ಏರ್ಲೈನ್ಸ್ನ ಗಗನಸಖಿಯೋರ್ವಳನ್ನು ರೌಡಿ ಅಜಯ್ ಪ್ರೀತಿಸುತ್ತಿದ್ದ. ಫೆಬ್ರವರಿಯಲ್ಲಿ ಈಕೆಗೆ ಪ್ರಪೋಸ್ ಕೂಡ ಮಾಡಿದ್ದ. ಆದರೆ ಆಕೆ ಪ್ರೇಮ ನಿರಾಕರಣೆ ಮಾಡಿ, ತನ್ನ ಮನೆಯವರಿಂದ ಬುದ್ಧಿವಾದ ಹೇಳಿಸಿದ್ದಳು. ಅಷ್ಟಕ್ಕೆ ಬಗ್ಗದ ಅಜಯ್ ಸಿನಿಮಾ ಸ್ಟೈಲ್ನಲ್ಲಿ ಯುವತಿಯ ಮನೆಗೆ ತೆರಳಿ ಅಲ್ಲಿದ್ದ ಕಾರ್, ಬೈಕ್‌ಗಳ ಗ್ಲಾಸ್ ಒಡೆದುಹಾಕಿದ್ದ. ಇದರಿಂದ ಬೆದರಿದ ಯುವತಿಯ ಮನೆಯವರು ಆತನ ವಿರುದ್ಧ ದೂರು ನೀಡಿದ್ದರು.
ಈ ಸೇಡು ತೀರಿಸಿಕೊಳ್ಳಲು ಅಜಯ್ ಕಾಯುತ್ತಿದ್ದ. ಮೇ 12ರಂದು ಸಂಜೆ ಯುವತಿ ಕೆಲಸ ಮುಗಿಸಿ ಹೆಬ್ಬಾಳ ಫ್ಲೈ ಓವರ್ ಬಳಿ ಕ್ಯಾಬ್ನಲ್ಲಿ ಬರುತ್ತಿದ್ದಾಗ ಇನ್ನೊಂದು ಕಾರಿನಿಂದ ಹಿಂಬಾಲಿಸಿದ್ದನು. ಸಿಗ್ನಲ್ ಬಳಿ ಕ್ಯಾಬ್ ನಿಂತಾಗ ಅದರೊಳಗೆ ನುಗ್ಗಿ, ಡ್ರೈವರ್ಗೆ ಚಾಕು ತೋರಿಸಿ ಹೆದರಿಸಿ, ಕಾರು ಚಲಾಯಿಸಲು ತಿಳಿಸಿದ್ದ. ಡ್ರೈವರ್ ಪ್ರತಿರೋಧ ತೋರಿದಾಗ ಆತನ ಭುಜಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಆನಂತರ ಯುವತಿಗೆ, ತನ್ನನ್ನು ಪ್ರೀತಿಸುವಂತೆ, ಕೇಸ್ ವಾಪಸ್ ಪಡೆಯುವಂತೆ ಕೇಳಿಕೊಂಡಿದ್ದ. ಇದಕ್ಕೆ ಯುವತಿ ಒಪ್ಪದಿದ್ದಾಗ ಚಾಕುವಿನಿಂದ ಆಕೆಯ ಕಿವಿಗಳನ್ನ ಕಟ್ ಮಾಡಿ ಪರಾರಿಯಾಗಿದ್ದ ಎಂದು ದೂರು ದಾಖಲಾಗಿದೆ.
ಗಾಯಗೊಂಡಿರುವ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಠಾಣಾ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.