ಬೆಂಗಳೂರು: ಹಗಲಲ್ಲಿ ಆಕಾಶ ಸ್ವಚ್ಛವಾಗಿದ್ದರೂ ಬಿಸಿಲಿನ ಅನುಭವ ಆಗುತ್ತಿಲ್ಲ. ನೆರಳಿರುವ ಸ್ಥಳಕ್ಕೋದರೂ ಚಳಿಯ ಅನುಭವವಾಗುತ್ತಿದೆ. ಬೈಕ್ ಮೇಲೆ ಚಲಿಸುವವರಿಗೆ ಹಗಲಲ್ಲೂ ಚಳಿಯ ತೀವ್ರ ಅನುಭವವಾಗುತ್ತಿದೆ.
ಸಂಜೆಯಾಗುತ್ತಿದ್ದಂತೆ ರಸ್ತೆ ಮೇಲೆ ಸಂಚರಿಸಲೂ ಜನರು ಹಿಂದೆಮುಂದೆ ನೋಡುತ್ತಿದ್ದಾರೆ. ರಾತ್ರಿ ಚಳಿ ಇನ್ನೂ ಹೆಚ್ಚಿ ಥರಗುಟ್ಟುವಂತಿರುತ್ತದೆ. ಬೆಳಗಿನ ಜಾವ ಮೈಕೊರೆವ ಚಳಿ ನಿವಾರಣೆಗೆ ಜನರು ಅಲ್ಲಲ್ಲಿ ಬೆಂಕಿ ಹೊತ್ತಿಸಿಕೊಂಡು ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚಳಿ ಮುಂದುವರೆದಿದ್ದು, ಬೆಚ್ಚನೆ ಉಡುಪುಗಳಿಗೆ ಬೇಡಿಕೆ ಹೆಚ್ಚಿದೆ. ಅದರ ಜೊತೆಗೆ ಕೊರೊನಾ ಕಾಟ ಕೂಡ ಜನರಲ್ಲಿ ದಿಗಿಲು ಹುಟ್ಟಿಸಿದೆ. ಚಳಿ ಹೆಚ್ಚಾದ ಪರಿಣಾಮ ವಾಣಿಜ್ಯ ನಗರಿ ಹುಬ್ಬಳ್ಳಿಯ ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ಬೆಚ್ಚನೆ ಉಡುಪುಗಳ ವ್ಯಾಪಾರ ಬಲು ಜೋರಾಗಿದೆ. ಆದರೆ, ಕೊರೊನಾ ಭೀತಿಯಿಂದಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ವ್ಯಾಪಾರ ಕುಂದಿದೆ.
ದಿನಪತ್ರಿಕೆ, ಹಾಲು ವಿತರಕರು ಕಾಲುಗಳಿಗೆ ಶೂಸ್, ಜರ್ಕಿನ್, ತಲೆಗೆ ಉಣ್ಣೆ ಟೊಪ್ಪಿಗೆ ಕೈಗೆ ಗ್ಲೌಸ್‌ಗಳನ್ನು ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಬೆಳಗ್ಗೆ 9ರವರೆಗೂ ರಸ್ತೆಗಳಲ್ಲಿ ಸಂಚಾರ ಕಡಿಮೆ ಇರುತ್ತದೆ. ಮೈಕೊರೆವ ಚಳಿಗೆ ತಾಲೂಕಿನ ಜನತೆ ತತ್ತರಿಸಿದ್ದಾರೆ. ಹೊಲಗಳಲ್ಲೇ ಬೀಡುಬಿಡುವ ಕುರಿಗಾಹಿಗಳು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾನ್ಯವಾದ ಉಡುಪು ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚಿನ ರಕ್ಷಣೆ ನೀಡುವುದಿಲ್ಲ. ಅದಕ್ಕಾಗಿಯೇ ಸ್ವೆಟರ್, ಜೀನ್ಸ್, ಜಾಕೆಟ್, ಜರ್ಕಿನ್, ಉಲ್ಲನ್ ಬಟ್ಟೆಗಳ ಮೊರೆ ಹೋಗಬೇಕಾಗಿದೆ.
ಕೊರೊನಾ ಬಂದು ಲಕ್ಷಾಂತರ ಬಂಡವಾಳ ಹಾಕಿರುವ ಶೋ ರೂಮ್ಗಳಿಗೇ ವ್ಯಾಪಾರ ಇಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಎಲ್ಲಿಂದ ವ್ಯಾಪಾರ ಆಗಬೇಕು. ಹಳ್ಳಿ ಜನ ಬಂದು ವ್ಯಾಪಾರ ಮಾಡುತ್ತಿಲ್ಲ. ಸಿಟಿ ಜನ ಹೆದರುತ್ತಾರೆ ಎನ್ನುತ್ತಾರೆ ವ್ಯಾಪಾರಸ್ಥರು. ಒಟ್ಟಿನಲ್ಲಿ ಒಂದು ಕಡೆ ವ್ಯಾಪಾರ ಡಲ್ ಇದ್ದರೆ, ಮತ್ತೊಂದೆಡೆ ವ್ಯಾಪಾರ ತುಂಬಾ ಜೋರಾಗಿದೆ.