ಬೆಂಗಳೂರು: ಸ್ನೇಹಿತನ ಜತೆ ಮಾತನಾಡುತ್ತಿದ್ದ ಯುವಕನ ಮೇಲೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಿಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು. ಕೊಲೆಯಾದ ವ್ಯಕ್ತಿ ಕೆ.ಜಿ.ಹಳ್ಳಿ ನಿವಾಸಿ ಸುಲ್ತಾನ್ ಪಾಷಾ (25), ಚಿಕನ್ ಅಂಗಡಿಯಲ್ಲಿ ಕೆಲಸ ಮುಗಿಸಿ, ಮನೆಗೆ ತೆರಳುತ್ತಿದ್ದನು. ಮಾರ್ಗಮಧ್ಯೆ ರಾಮ್‌ಟೆಂಟ್ ರಸ್ತೆಯಲ್ಲಿ ಸ್ನೇಹಿತನ ಜತೆ ಮಾತನಾಡಿಕೊಂಡು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಗುಮ್ಮಟನಗರಿಯಲ್ಲಿ ಚೆಲ್ಲಿದ ರಕ್ತ.!
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಲ್ತಾನ್ ಪಾಷಾನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸುಲ್ತಾನ್ ಮೃತಪಟ್ಟಿದ್ದಾನೆ.
ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಲಾಗಿದ್ದು, ಆರೋಪಿಗಳ ಮುಖಚಹರೆಯ ಗುರುತು ಪತ್ತೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.