ಬೆಂಗಳೂರು: ಮದ್ಯ ಮತ್ತು ಗಾಂಜಾ ಮತ್ತಿನಲ್ಲಿದ್ದ ಪುಂಡರ ಗುಂಪೊಂದು ಮಹಿಳೆ ಮತ್ತು ಆಕೆಯ ತಮ್ಮನ ಮೇಲೆ ಹಲ್ಲೆ ನಡೆಸಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿಟೌನ್‌ನಲ್ಲಿ ನಡೆದಿದೆ.
ಎಲ್ಸಿ ಎಂಬ ಮಹಿಳೆ ಮತ್ತು ಆಕೆಯ ತಮ್ಮ ನವೀನ್ ಮೇಲೆ ಹಲ್ಲೆ ನಡೆಸಲಾಗಿದೆ. ಶನಿವಾರ ರಾತ್ರಿ ಪುಂಡರ ಗುಂಪೊಂದು ಮದ್ಯ ಸೇವಿಸಿ ಬಂದು ಮಹಿಳೆಯೊಬ್ಬರ ಮನೆ ಮುಂದೆ ಕುಳಿತು ಗಾಂಜಾ ಸೇದುತ್ತಿದ್ದರಂತೆ.
ಇದನ್ನು ನವೀನ್ ಮತ್ತು ಮಹಿಳೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲು ನವೀನ್ ಮೇಲೆ ಆನಂತರ ಮಹಿಳೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ನಿರ್ಮಾಣ ಹಂತದ ಸೇತುವೆ ಕುಸಿದು 27 ಜನರಿಗೆ ಗಾಯ!
ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿದ ಖದೀಮರು:
ಪುಂಡರ ಗುಂಪೊಂದು ಮನೆ ಮುಂದೆ ಗಾಂಜಾ ಸೇದುತ್ತಾ ಇರುವುದನ್ನು ಗಮನಿಸಿ ಅವರ ಬಳಿ ಹೋಗಿ, ಇಲ್ಲಿ ಯಾಕೆ ಗಾಂಜಾ ಸೇದುತ್ತಿದ್ದೀರಾ? ಎಂದು ಪ್ರಶ್ನಿಸಿದೆ. ಈ ಮಧ್ಯೆ ಸುಭಾಷ್ ಎಂಬುವನು ಏನೋ ಎಗರಾಡುತ್ತಿದ್ದೀಯಾ ಅಂದ. ಆಗ ನಮ್ಮ ಅಕ್ಕ ಮಧ್ಯ ಪ್ರವೇಶಿಸಿ, ಏನು ಸಮಸ್ಯೆ ಇಲ್ಲ, ಇದು ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ. ನೀವು ಹೋಗಿ ಎಂದು ಹೇಳಿದರು.
ಆಗ ಶರ್ಟ್ ಬಿಚ್ಚಿ ಆತ ಅಸಭ್ಯವಾಗಿ ವರ್ತಿಸಿದ. ನನಗೆ ಕೋಪ ಬಂತು, ನಾನು ಆತನಿಗೆ ಹೊಡೆಯಲು ಹೋದೆ. ಆಗ ಎಲ್ಲರೂ ಒಟ್ಟಾಗಿ ಸೇರಿಕೊಂಡು ನನ್ನನ್ನು ನೆಲಕ್ಕೆ ಹಾಕಿಕೊಂಡು ಹೊಡೆದರು. ನಂತರ ಕಲ್ಲು ತೆಗೆದುಕೊಂಡು ನನ್ನ ಕಾಲಿನ ಮೇಲೆ ಎತ್ತಿ ಹಾಕಿದರು. ನನಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲ್ಲೆಗೊಳಗಾದ ನವೀನ್ ತಿಳಿಸಿದ್ದಾರೆ.