ಬೆಂಗಳೂರು: ವಿವಾಹಿತ ಮಹಿಳೆಯೊರ್ವರ ಶವ ಅನುಮಾನಾಸ್ಪದ ರೀತಿಯಲ್ಲಿ ಬೆಂಗಳೂರಿನ ಜ್ಞಾನ ಜ್ಯೋತಿ ನಗರದ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ರಂಜಿತಾ ಮೃತ ಗೃಹಿಣಿ (26). ಕಳೆದ ಕೆಲ ವರ್ಷದ ಹಿಂದೆ ಓಂಕಾರ ಎನ್ನುವವರ ಜೊತೆ ವಿವಾಹವಾಗಿತ್ತು. ಬೀದರ್ ಮೂಲದ ಈ ದಂಪತಿಗೆ ಮಕ್ಕಳಿರಲಿಲ್ಲ. ರಂಜಿತಾಳ ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ಸಾಕ್ಷಿ ನಾಶ ಪಡಿಸಲು ಯತ್ನಿಸಲಾಗಿದೆ. ಆರೋಪಿಗಳು ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದಾರೆ.
ಈ ಕುರಿತು ಮೃತಳ ಪತಿ ದೂರು ನೀಡಿದ್ದು, ವೈಯಕ್ತಿಕ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ಯಾವುದೇ ಸಾಮಾಗ್ರಿಗಳು ಕಾಣೆಯಾಗಿಲ್ಲ. ಹೀಗಾಗಿ ಕುಟುಂಬಸ್ಥರಲ್ಲೇ ಒಬ್ಬರು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.