ಬೆಂಗಳೂರು: ಎರಡು ವರ್ಷದ ಹಿಂದೆ ನಡೆದ ಕೊಲೆಯ ಪ್ರತೀಕಾರವಾಗಿ ಯುವಕನ ತಲೆ ಕಡಿದು ಬರ್ಬರವಾಗಿ ಹತೈ ಮಾಡಿದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸಪುರದಲ್ಲಿ ನಡೆದಿದೆ.
ಶ್ರೀನಿವಾಸಪುರ ನಿವಾಸಿ ರಾಘವೇಂದ್ರ (28) ಮೃತ ಯುವಕ. ಹಂತಕರಾದ ಹೇಮಣ್ಣ ಹಾಗೂ ವೇಲು ತಲೆಮರೆಸಿಕೊಂಡಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ವರ್ಷದ ಹಿಂದೆ ರಾಘವೇಂದ್ರ ಚಿಕ್ಕಪ್ಪ ಮುನಿಸ್ವಾಮಿ ಹಾಗೂ ಮಗ ವಾಸು ಎಂಬುವರು ಮುನಿರಾಜು ಎಂಬುವನೊಂದಿಗೆ ಟ್ರ್ಯಾಕ್ಟರ್ ಓಡಿಸುವ ವಿಷಯವಾಗಿ ಜಗಳವಾಗಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ತಂದೆ - ಮಕ್ಕಳು ಮುನಿರಾಜುನನ್ನು ಕೊಲೆ ಮಾಡಿದ್ದರು. ಗಲಾಟೆಯಲ್ಲಿ ಹತ್ಯೆಯಾದ ಮುನಿರಾಜು ಅಳಿಯ ಹೇಮಣ್ಣನಿಗೂ ಗಾಯವಾಗಿತ್ತು. ಇದೇ ದ್ವೇಷದ ಹಿನ್ನೆಲೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಕೊಲೆಗೆ ವಿಫಲ ಯತ್ನ ನಡೆಸಿದ್ದರಿಂದ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದರು.
ಮುನಿಸ್ವಾಮಿ ಹಾಗೂ ವಾಸು ಜೀವಭಯದಿಂದ ದಾವಣಗೆರೆಯಲ್ಲಿ ವಾಸವಾಗಿದ್ದರು. ಜೈಲಿಂದ ಜಾಮೀನು ಪಡೆದು ಹೊರಬಂದ ಹೇಮಣ್ಣ ತಂದೆ - ಮಗನ ಕೊಲೆ ಮಾಡಲು ಕತ್ತಿ ಮಸಿಯುತ್ತಿದ್ದ. ತಂದೆ ಮಗನನನ್ನು ಎಲ್ಲಿ ಬಚ್ಚಿಟ್ಟದ್ದೀರಾ ಹೇಳಿ ಇಲ್ಲವಾದರೆ ನಿಮ್ಮ ಕುಟುಂಬದ ಒಬ್ಬನನ್ನು ಕೊಲೆ ಮಾಡುವುದಾಗಿ ರಾಘವೇಂದ್ರ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆ ಕಡಿದು ಕಾಲಿನ ಕೆಳಗಿಟ್ಟು ಕ್ರೂರತನ: ಮಾವನ ಕೊಲೆಯ ಪ್ರತೀಕಾರ ತೀರಿಸಲು ಹಪಹಪಿಸುತ್ತಿದ್ದ ಹೇಮಣ್ಣ, ರಾಘವೇಂದ್ರ ಕುಟುಂಬಸ್ಥರೇ ಮುನಿಸ್ವಾಮಿ ಕುಟುಂಬವನ್ನು ಬಚ್ಚಿಟ್ಟಿದ್ದಾರೆ ಎಂದು ಭಾವಿಸಿ ರಾಘವೇಂದ್ರ ಕೊಲೆ ಮಾಡಲು ನಿರ್ಧರಿಸಿದ್ದ. ಇದಕ್ಕೆ ಸಹಚರ ವೇಲು ಸಾಥ್ ನೀಡಿದ್ದ. ಪೂರ್ವಸಂಚಿನಂತೆ ನಿನ್ನೆ ಸಂಜೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದಾರೆ. ವಾಲಿಬಾಲ್ ಆಡುತ್ತಿದ್ದ ರಾಘವೇಂದ್ರನ ಜೊತೆ ಮಾತನಾಡುವ ನೆಪದಲ್ಲಿ ಸೈಡಿಗೆ ಕರೆದುಕೊಂಡು ಏಕಾಏಕಿ ಮಚ್ಚಿನ ದಾಳಿ ನಡೆಸಿದ್ದಾರೆ. ತಲೆ ಕಡಿದು ಕಾಲಿನ ಕೆಳಗೆ ಬಿಸಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.