ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಕೊಲೆ ಕೇಸ್ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಇಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ವಿಚಾರವಾದಿ 2015ರಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಂ.ಎಂ.ಕಲ್ಬುರ್ಗಿ ಅವರನ್ನು ಹಂತಕರು ಗುಂಡಿಟ್ಟು ಹತ್ಯೆಗೈದಿದ್ದರು. ನಂತರ ಪ್ರಕರಣ ಸಿಐಡಿ ವರ್ಗವಾಗಿ ಸುಮಾರು ಎರಡು ವರ್ಷಗಳ ಕಾಲ ತನಿಖೆ ನಡೆಸಿ ಸುಪ್ರೀಂಕೋರ್ಟ್ ಆದೇಶದನ್ವಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಿದ್ದ ಎಸ್ಐಟಿಗೆ ವಹಿಸಿತ್ತು.
ತನಿಖಾಧಿಕಾರಿ ಎಂ.ಎನ್.ಅನುಚೇತ್ ನೇತೃತ್ವದ ತಂಡವು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ತಜ್ಞರ ಅಭಿಪ್ರಾಯಗಳು ಹಾಗೂ ಮತ್ತಿತರ ಸಾಕ್ಷ್ಯಾಧಾರ ಸಂಗ್ರಹಿಸಿ ಕಲ್ಬುರ್ಗಿ ಅವರ ಸಂಚು ರೂಪಿಸಿ ಹತ್ಯೆ ಮಾಡಿದ್ದ ಆರು ಮಂದಿ ಆರೋಪಿಗಳ ಹೆಸರು ಒಳಗೊಂಡ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಆರೋಪಿಗಳಾದ ಅಮೋಲ್ ಎ. ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಪ್ರಕಾಶ್ ಚತುರ್, ವಾಸುದೇವ್ ಭಗವಾನ್ ಸೂರ್ಯವಂಶಿ, ಶರದ್ ಬಾಹು ಸಾಹೇಬ್ ಕಳಾಸ್ಕರ್ ಹಾಗೂ ಅಮಿತ್ ಬದ್ದಿ ಕೊಲೆಯ ಹಿಂದಿನ ರೂವಾರಿಯಾಗಿದ್ದಾರೆ. ಈ ಆರೋಪಿಗಳು ಸಂಘಟನೆಯೊಂದರ ಸದಸ್ಯರಾಗಿದ್ದು ಸನಾತನ ಸಂಸ್ಥೆಯೊಂದು ಪ್ರಕಟಿಸಿರುವ ಕ್ಷಾತ್ರ ಧರ್ಮ ಸಾಧನೆ ಎಂಬ ಪುಸ್ತಕದಲ್ಲಿ ಬರೆದಿರುವ ಮಾರ್ಗಸೂಚಿಗಳು ಹಾಗೂ ತತ್ವ ಸಿದ್ದಾಂತ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಸಂಚು ರೂಪಿಸುತ್ತಿದ್ದರು. ಸಂಘಟನೆಯಲ್ಲಿ ಹಿಂಸಾತ್ಮಕ ಪ್ರವೃತ್ತಿಯುಳ್ಳ ಹಾಗೂ ಆಕ್ರಮಣಕಾರಿ ಮನೋಭಾವವುಳ್ಳ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದರು.
ಈ ಆರೋಪಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗೌಪ್ಯವಾಗಿ ಸಭೆ ಸೇರಿ ದೈಹಿಕ ಹಾಗೂ ಶಸ್ರ್ರಾಸ್ರ್ರ ತರಬೇತಿ ಪಡೆದುಕೊಳ್ಳುತ್ತಿದ್ದರು. ತಮ್ಮ ಗುರುತುಗಳನ್ನು ಮರೆಮಾಚಲು ಆರೋಪಿಗಳು ತಮ್ಮ ಹೆಸರನ್ನು ಮುಚ್ಚಿಟ್ಟುಕೊಂಡು ಅಡ್ಡ ಹೆಸರುಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಕಲ್ಬುರ್ಗಿ ಕೊಲೆಗೆ ಕಾರಣವೇನು ?
2014ರಂದು ಜು.9ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಒಂದು ಚರ್ಚೆ ಕಾರ್ಯಕ್ರಮ ಉದ್ದೇಶಿಸಿ ಕಲ್ಬುರ್ಗಿ ಭಾಷಣ ಮಾಡಿದ್ದರು. ಇದನ್ನು ತ್ರೀವಗೊಳಿಸಿದ್ದ ಆರೋಪಿಗಳು ದುರ್ಜನರು ಎಂದು ಪರಿಗಣಿಸಿ ಹತ್ಯೆ ಮಾಡಲು ನಿರ್ಧರಿಸಿದ್ದರು.
ಗುಂಡಿಟ್ಟು ಕೊಂದಿದ್ದು ಯಾರು? ಬೈಕ್ ಓಡಿಸಿದ್ದು ಯಾರು ?
2015ರಲ್ಲಿ ಜನವರಿಯಿಂದ ಮೇವರೆಗೂ ಆರೋಪಿಗಳು ಹಲವು ಬಾರಿ ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಉದ್ಯಾನವನದಲ್ಲಿ ಸೇರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಲು ತೀರ್ಮಾನಿಸಿದ್ದರು. ಹತ್ಯೆ ಮಾಡಲು ಪ್ರಮುಖ ಆರೋಪಿ ಅಮೋಲ್ ಕಾಳೆ ಎರಡನೇ ಆರೋಪಿ ಗಣೇಶ್ ಮಿಸ್ಕಿನ್ಗೆ ಕಲ್ಬುರ್ಗಿ ಅವರ ಚಲನವಲನ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದ. ಇದೇ ಉದ್ದೇಶಕ್ಕಾಗಿ ವಾಸುದೇವ್ಗೆ ಮೋಟಾರ್ ಬೈಕ್ ಕಳ್ಳತನ ಮಾಡಿ ಮಿಸ್ಕಿನ್ಗೆ ನೀಡುವಂತೆ ಹೇಳಿದ್ದ. ಅದರಂತೆ ಆರೋಪಿಗಳು ಹುಬ್ಬಳ್ಳಿಯಲ್ಲಿ ಬಜಾಜ್ ಡಿಸ್ಕವರ್ ಬೈಕ್ ಕಳ್ಳತನ ಮಾಡಿ ಹಾಗೂ ಕಲ್ಬುರ್ಗಿ ಅವರ ಸಮೀಕ್ಷೆ ಮಾಡಿ ಕಾಳೆ ವರದಿ ನೀಡಿದ್ದ.
2015ರ ಆಗಸ್ಟ್ನಲ್ಲಿ ಮಿಸ್ಕಿನ್ ಹಾಗೂ ಪ್ರವೀನ್ ಚತುರ್ ಅವರನ್ನು ದಕ್ಷಿಣ ಕನ್ನಡದ ಪಿಲಾತಬೆಟ್ಟು ಗ್ರಾಮದ ಒಂದು ರಬ್ಬರ್ ತೋಟದಲ್ಲಿ ನಾಡಪಿಸ್ತೂಲ್ನಿಂದ ಗುಂಡು ಹಾರಿಸುವ ಅಭ್ಯಾಸ ಮಾಡಿದ್ದರು. ಅದೇ ತಿಂಗಳ ಎರಡನೇ ವಾರದಲ್ಲಿ ಕಲ್ಬುರ್ಗಿಯವರನ್ನು ಹತ್ಯೆಗೆ ಅಂತಿಮ ನಡೆಸಿದ್ದರು. ಆ.30ರ ಬೆಳಗ್ಗೆ ಬೈಕ್ ಸವಾರನಾಗಿ ಪ್ರವೀಣ್ ಚತುರ್ ಹಾಗೂ ಜೀವಂತ ಗುಂಡುಗಳನ್ನು ತುಂಬಿದ್ದ 7.65 ಎಂ.ಎಂ. ನಾಡಪಿಸ್ತೂಲ್ ಇದ್ದ ಒಂದ ಬ್ಯಾಗ್ನ್ನು ಅಮೋಲ್ ಕಾಳೆ ನೀಡಿದ್ದ.
ಅದರಂತೆ ಬೆಳಗ್ಗೆ 8.30ಕ್ಕೆ ಕಲ್ಬುರ್ಗಿ ಮನೆಯ ಮುಂಬಾಲಿಗೆ ಹೋಗಿ ನೇರವಾಗಿ ಕಲ್ಬುರ್ಗಿ ಅವರ ಹಣೆಗೆ ಪಿಸ್ತೂಲಿನಿಂದ ಎರಡು ಗುಂಡು ಹಾರಿಸಿ, ಬೈಕ್ ಸಮೇತ ಪರಾರಿಯಾಗಿದ್ದರು ಎಂದು ಎಸ್ಐಟಿ ತಿಳಿಸಿದೆ.