ಬೆಂಗಳೂರು : ಸಿಎಂ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ನಿರ್ಗಮಿಸುತ್ತಾರೆ ಎನ್ನುವ ಹೊತ್ತಲ್ಲಿ ರಾಜ್ಯದ ಜನತೆ ಸೂರಿನ ಭಾಗ್ಯ ಕಲ್ಪಿಸಿದ್ದಾರೆ. ಮುಂದಿನ ಎರಡು ವರ್ಷದಲ್ಲಿ 8 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶದಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ. ಬೆಂಗಳೂರಲ್ಲಿ 1 ಲಕ್ಷ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯಡಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಕ್ಸಾಗನ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಟೆಲಿಜನ್ಸ್ ಇಂಡಿಯಾ ಕಂಪನಿ ರಾಜ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿನ ಕ್ಯಾಂಪಸ್‌ಗಳಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನದ ಆವಿಷ್ಕಾರ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು 770 ಕೋಟಿ ರೂ. ಅಂದಾಜು ಮೊತ್ತದಲ್ಲಿ 3 ವರ್ಷಗಳ ಅವಧಿಗೆ ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, ಹೆಕ್ಸಾಗನ್ ಸಂಸ್ಥೆ 85 ಕೋಟಿ ರೂ. ಭರಿಸಲಿದೆ. ಉಳಿದ ವೆಚ್ಚ ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯದಲ್ಲಿ ಏಳು ಕೇಂದ್ರಗಳನ್ನು ನಿರ್ಮಿಸಲಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಅಲ್ಲದೆ, ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ- ನೂತನ ಯೋಜನೆ 75 ಕೋಟಿ ರೂ. ಅಂದಾಜಿನಲ್ಲಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.