ಬೆಂಗಳೂರು: ದೆಹಲಿ ಮೂಲದ ಆರೋಪಿಗಳಿಬ್ಬರು ಆಭರಣದಂಗಡಿಗೆ ಕನ್ನ ಹಾಕಲು ತಿಂಗಳ ಹಿಂದೆನೇ ಸ್ಕೆಚ್ ಹಾಕಿ ಕುಳಿತಿದ್ದರು. ಅದರಂತೆ ಮುನ್ನಡೆದ ಆರೋಪಿಗಳು ಶಾಪ್ನ ಗೋಡೆ ಕೊರೆದು 2.50 ಕೋಟಿ ಮೌಲ್ಯದ ಐದು ಕೆಜಿ ಚಿನ್ನವನ್ನು ದೋಚಿರುವ ಘಟನೆ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್‌ನಲ್ಲಿ ನಡೆದಿದೆ.
ಸ್ವಂತ ಕಟ್ಟಡದಲ್ಲೇ ಶಾಪ್: ಜೆ ಪಿ ನಗರ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ 2010ರಿಂದ ಜೆ ಪಿ ನಗರ 1ನೇ ಹಂತದ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲರ್ಸ್ ಶಾಪ್ ಆರಂಭಿಸಿದ್ದರು. ಪ್ರತಿನಿತ್ಯ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಾದ ಬಳಿಕ ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು.
ಚಿನ್ನ ದೋಚಲು ಸ್ಕೆಚ್: ದೆಹಲಿ ಮೂಲದ ಇಬ್ಬರು ಆರೋಪಿಗಳು ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಖಾಲಿ ಇರುವುದನ್ನು ಗಮನಿಸಿದ್ದರು. ಕಳೆದ 1 ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರ್ಸ್‌ಗೆ ಕನ್ನ ಹಾಕಲು ಸಂಚು ರೂಪಿಸಿದ್ದರು.
ಓದಿ: ಮಂಡ್ಯ ದರೋಡೆ ಪ್ರಕರಣ: ₹80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ
ಗೋಡೆ ಕೊರೆಯಲು ಆರಂಭ: ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು.
ಚಿನ್ನ ದರೋಡೆ: ಇತ್ತ ಗೋಡೆ ಕೊರೆದು ಜ್ಯುವೆಲ್ಲರಿಯೊಳಗೆ ನುಗ್ಗಿದ ಆರೋಪಿಗಳು ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ದೋಚಿದ್ದಾರೆ. ಏ.18ರಂದು ಬೆಳಗ್ಗೆ 10 ಗಂಟೆಗೆ ರಾಜು ಜ್ಯುವೆಲರ್ಸ್ ತೆರೆದಾಗ ಕಳ್ಳತನವಾದ ಸಂಗತಿ ಬೆಳಕಿಗೆ ಬಂದಿದೆ.
ದೂರು ದಾಖಲು: ಕಳ್ಳತನವಾದ ಕೂಡಲೇ ರಾಜು ಜೆ ಪಿ ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಆರೋಪಿಗಳು ಬಾಡಿಗೆಗೆ ಪಡೆದಿದ್ದ ಮನೆ ಮಾಲೀಕರ ಬಳಿ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ದಾಖಲೆ ಎಂಬುದು ಪತ್ತೆಯಾಗಿದೆ.
ಓದಿ: ಬೆಳಗಾವಿ: ವಾಹನ ಅಡ್ಡಗಟ್ಟಿ 4.97 ಕೋಟಿ ರೂಪಾಯಿ ದರೋಡೆ
ನಕಲಿ ದಾಖಲೆ: ಬಾಡಿಗೆಗೆ ಪಡೆದಿದ್ದ ಮನೆಯ ಮಾಲೀಕರಿಗೆ ದೆಹಲಿ ಹಾಗೂ ಉತ್ತರಾಖಂಡ್‌ನ ವಿಳಾಸದ ನಕಲಿ ಆಧಾರ್ ಕಾರ್ಡ್ ನೀಡಿದ್ದರು. ಒಂದು ತಿಂಗಳಿನಿಂದ ಅಂಗಡಿಯಲ್ಲಿರುವ ಚಿನ್ನಾಭರಣ ಸೇರಿ ಇನ್ನಿತರ ಮಾಹಿತಿಯನ್ನು ಕಲೆ ಹಾಕಿದ್ದರು. ಖದೀಮರ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಶೇಷ 3 ತಂಡ ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಿಗಾಗಿ ಶೋಧ: ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ ಪಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.