ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ಕಾಡುತ್ತಿದ್ದು, ಯಾರೂ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಬ್ಬ ವ್ಯಕ್ತಿಗೆ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ಮೂಲಕ ಬೆಂಗಳೂರಿನಲ್ಲೇ 5 ಮಂದಿಗೆ ಸೋಂಕು ತಗುಲಿದಂತಾಗಿದೆ.
ಪಾಸಿಟಿವ್ ಪ್ರಕರಣಗಳು ಸೇರಿದಂತೆ ಒಟ್ಟು 18 ಮಂದಿಯನ್ನ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಮಂದಿ ದಾಖಲಾಗಿದ್ದು, ಬೆಂಗಳೂರಿನ ಇತರ ಕೊರೊನಾ ವಾರ್ಡ್ನಲ್ಲಿ ಇಬ್ಬರು ದಾಖಲಾಗಿದ್ದಾರೆ. ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿಯಲ್ಲಿ ಒಬ್ಬರನ್ನ ದಾಖಲು ಪ್ರತ್ಯೇಕ ವಾರ್ಡ್ನಲ್ಲಿಟ್ಟು ನಿಗಾವಹಿಸಲಾಗಿದೆ.
ವೈರಸ್ ಸೋಂಕು ತಗುಲಿರುವ ವ್ಯಕ್ತಿ ಮೂಲತಃ ಮುಂಬೈ ಮೂಲದವನು. ಗ್ರೀಸ್ನಿಂದ ಮುಂಬೈಗೆ ಮಾ.6ರಂದು ಬಂದಿದ್ದ. ಅಲ್ಲಿಂದ ಮಾ.8ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾನೆ.
ಮಾ.9ಕ್ಕೆ ಆತ ಕಚೇರಿಗೆ ಹೋಗಿದ್ದಾನೆ. ಆಗ ಆತ ಕೇವಲ ನಾಲ್ವರು ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸಾಗಿದ್ದಾನೆ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದು, ಆದರೆ ಈತ ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ಮರಳಿ ಬಂದಿದ್ದಾನೆ. ಅದೇ ದಿನ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಸೋದರ ಬೆಂಗಳೂರಿನಲ್ಲಿದ್ದು, ಜೊತೆಗೆ ವಾಸ ಮಾಡುತ್ತಿದ್ದಾನೆ. ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿಗೆ ಬಂದಾಗ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ. ಆಟೋ ಚಾಲಕನನ್ನು ಪತ್ತೆ ಹಚ್ಚಲಾಗಿದೆ. ಆತನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.