ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆ ಆರೋಪ ಸಂಬಂಧ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ. ಶುಕ್ರವಾರ ಕೇಂದ್ರ ಗೃಹ ಇಲಾಖೆಯಿಂದ ಫೋನ್ ಕರೆ ಬಂದಿತ್ತು. ಬಳಿಕ ಬೆಂಗಳೂರಿನ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಕೋರಿದ್ದಾರೆ ಎಂದು ಕೆಂಪಣ್ಣ ತಿಳಿಸಿದ್ದಾರೆ.
ಕೆಂಪಣ್ಣ ರಾಜ್ಯದಲ್ಲಿನ ಪ್ರಮುಖ ಇಲಾಖೆಗಳಲ್ಲಿನ 40 ಪರ್ಸೆಂಟ್ ಕಮಿಷನ್ ಅವ್ಯವಹಾರದ ಬಗ್ಗೆ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈ 40 ಪರ್ಸೆಂಟ್ ಕಮಿಷನ್ ಆರೋಪ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದವು. ಈ ಆರೋಪ ಕೇಂದ್ರ ಸರ್ಕಾರಕ್ಕೂ ಸಾಕಷ್ಟು ಮುಜುಗರ ತಂದೊಡ್ಡಿತ್ತು.
ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣ ಭಾರಿ ಸದ್ದು, ಗದ್ದಲಕ್ಕೆ ಕಾರಣವಾಗಿತ್ತು. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ಕೆಂಪಣ್ಣ ಅವರಿಗೆ ಕರೆ ಬಂದು ದಾಖಲೆ ನೀಡುವಂತೆ ಕೇಳಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ತನಿಖೆ ಮಾಡುವುದಾದರೆ ಮಾತ್ರ ಪೂರಕ ದಾಖಲೆಗಳನ್ನು ನೀಡುತ್ತೇನೆ. ಸದ್ಯ ಕಮಿಷನ್ ಸಂಬಂಧ ಮಾಹಿತಿಯನ್ನು ನೀಡುತ್ತೇನೆ ಎಂದು ಕೆಂಪಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಸಂತೋಷ್ ಕೇಸ್‌ನಲ್ಲಿ ವಿಪಕ್ಷಗಳನ್ನೇ ತನಿಖೆಗೊಳ್ಪಡಿಸ್ಬೇಕು.. ಕೆಂಪಣ್ಣ ವಿರುದ್ಧ ಮಾನನಷ್ಟ ಪ್ರಕರಣ ಹಾಕುವೆ.. ಸಚಿವ ಸುಧಾಕರ್