ಬೆಂಗಳೂರು : ಕೊರೊನಾ ಮಹಾಮಾರಿ ಭೀತಿಯ ನಡುವೆಯೇ ರೂಪಾಂತರ ಹೊಂದಿದ ಕೋವಿಡ್ ವೈರಾಣು ಆತಂಕ ಮೂಡಿಸಿದೆ. ಇದೀಗ ಯುಕೆಯಿಂದ ಬಂದ ಮೂವರಿಗೆ ರೂಪಾಂತರ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆ ಸೋಂಕಿತರ ಮನೆಯನ್ನು ಸ್ಯಾನಿಟೈಸರ್ ಮಾಡಿ ಸೀಲ್ಡೌನ್ ಮಾಡಲಾಗಿದೆ.
29 ಮಂದಿ ಯುಕೆ ಪ್ರಯಾಣಿಕರಲ್ಲಿ ಇದೀಗ ಕೇವಲ ನಾಲ್ವರನ್ನು ಮಾತ್ರ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. 11 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಉಳಿದ 14 ಜನರ ಸ್ಯಾಂಪಲ್ ಟೆಸ್ಟ್ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.
ನಿಮ್ಹಾನ್ಸ್‌ನಲ್ಲಿ ಲ್ಯಾಬ್ ರೂಪಾಂತರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ಯುಕೆಯಿಂದ ಬಂದ 1,903 ಮಂದಿಯನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 29 ಜನರ ವರದಿ ಪಾಸಿಟಿವ್ ಬಂದಿದೆ.
1,599 ನೆಗಟಿವ್ ಬಂದಿದ್ದು, 275 ಜನರ ಕೋವಿಡ್ ವರದಿ ಬರಬೇಕಿದೆ. ಇವರ ವರದಿ ಪಾಸಿಟಿವ್ ಬಂದ್ರೆ ರೂಪಾಂತರಿ ವೈರಸ್ ಹರಡಿದೆಯೋ ಇಲ್ಲವೋ ಎಂದು ಮತ್ತೊಮ್ಮೆ ಪರೀಕ್ಷಿಸಬೇಕು.