ಬೆಂಗಳೂರು : ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ವಿರುದ್ಧ ಈವರೆಗೂ 3,800 ದೂರು ಬಂದಿವೆ. 86 ಕೋಟಿ ರೂಪಾಯಿ ನಷ್ಟವಾಗಿರುವುದು ತನಿಖೆ ವೇಳೆ ರಾಜಾಜಿನಗರ ಪೊಲೀಸರು ಕಂಡುಕೊಂಡಿದ್ದಾರೆ.
ತಾವರೆಕೆರೆ, ಮಾಗಡಿರೋಡ್, ನೆಲಮಂಗಲ ಹಾಗೂ ಕಗ್ಗಲಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಕಂಪನಿಯು ಜನರಿಂದ 1ರಿಂದ 5 ಲಕ್ಷದವರೆಗೆ ಹಣ ಪಡೆದಿತ್ತು. ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆ ಜಾಗ ಅಭಿವೃದ್ದಿಪಡಿಸುತ್ತಿದ್ದು, ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಹಲವು ವರ್ಷಗಳಾದರೂ ನಿವೇಶನ ಕೊಡಿಸದೆ ಸತಾಯಿಸಿತ್ತು.
ಆರೋಪಿ ದಿನೇಶ್ ಗೌಡ ಅರೆಸ್ಟ್ : ಮತ್ತೊಂದೆಡೆ ಕಂಪನಿ ಮುಖ್ಯಸ್ಥ ದಿನೇಶ್ ಗೌಡ ತಲೆಮರೆಸಿಕೊಂಡಿದ್ದರಿಂದ ರಾಜಾಜಿನಗರದಲ್ಲಿರುವ ಕಂಪನಿ ಮುಂದೆ ಹೂಡಿಕೆ ಮಾಡಿದ ಹಣ ಹಿಂತಿರುಗಿಸುವಂತೆ ಜನರು ಪ್ರತಿಭಟಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಕಂಪನಿ ಮಾಲೀಕ ದಿನೇಶ್ ಗೌಡನನ್ನು ಪೊಲೀಸರು ಬಂಧಿಸಿದ್ದರು.
ಆರ್ಥಿಕ ವಂಚನೆ ಪ್ರಕರಣವಾಗಿರುವುದರಿಂದ ಕೆಲವೇ ದಿನಗಳಲ್ಲಿ ಸಿಐಡಿಗೆ ವರ್ಗಾವಣೆಯಾಗಲಿದೆ. ನ್ಯಾಯಾಂಗ ಬಂಧನದಲ್ಲಿರುವ ದಿನೇಶ್ ಗೌಡನನ್ನು ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದೆ. ಈಗಾಗಲೇ ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ (buds)ಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅರೆಸ್ಟ್
ಹಣ ಹೂಡಿಕೆ ಮಾಡಿದವರಿಗೆ ನ್ಯಾಯ ಕೊಡಿಸಲು ಬಡ್ಸ್ ಕಾಯ್ದೆಯಡಿ ಕಂಪನಿ ಮಾಲೀಕ ದಿನೇಶ್ ಗೌಡ ಆಸ್ತಿಯ ಬಗ್ಗೆ ಕೂಡ ರಾಜಾಜಿನಗರ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಅಧಿಕೃತವಾಗಿ ಪ್ರಕರಣ ಹಸ್ತಾಂತರವಾಗುತ್ತಿದ್ದಂತೆ ಆರೋಪಿತನ ಆಸ್ತಿ ಸೇರಿದಂತೆ ಎಲ್ಲಾ ಮಾಹಿತಿ ಬಗ್ಗೆ ಸಿಐಡಿ ಪರಿಶೀಲನೆ ನಡೆಸಲಿದೆ.
ಈ ಕಾಯ್ದೆ ಹಾಕಿದ ಮೇಲೆ ಈಗಾಗಲೇ ಹೂಡಿಕೆದಾರರಿಗೆ ಯಾವುದಾದರೂ ರೂಪದಲ್ಲಿ ಹಣ ಸಂದಾಯ ಆಗಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಂತರ ಆರೋಪಿಯ ಚರಾಸ್ಥಿ ಹಾಗೂ ಸ್ಥಿರಾಸ್ಥಿಯ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.