ಬೆಂಗಳೂರು: 15ನೇ ವಿಧಾನಸಭೆ ವಿಸರ್ಜನೆಯಾಗುವವರೆಗೂ ಮೂವರು ಶಾಸಕರನ್ನು ಅನರ್ಹಗೊಳಿಸಿ, ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಣೆಬೆನ್ನೂರು ಶಾಸಕ ಆರ್. ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ರಾಜ್ಯದ 15 ನೇ ವಿಧಾನಸಭೆ ಸದಸ್ಯರಾಗಿ ಮುಂದುವರಿಯಲು ಅನರ್ಹರಾಗಿರುತ್ತಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದೇನೆ ಎಂದರು.
ರಾಣೆಬೆನ್ನೂರು ಶಾಸಕರಾಗಿ ಆಯ್ಕೆಯಾಗಿದ್ದ ಆರ್. ಶಂಕರ್ ಹಾಗೂ ಇತರೆ ಇಬ್ಬರು ಶಾಸಕರನ್ನು ಈ ವಿಧಾನಸಭೆ ಅವಧಿಗೆ ಅನರ್ಹಗೊಳಿಸಲಾಗಿದೆ. ಅವಧಿ ಮುಗಿಯುವವೆಗೂ ಅವರು ಚುನಾವಣೆ ಎದುರಿಸುವಂತಿಲ್ಲ. ನಾನಂದುಕೊಂಡಂತೆ ಮುಂದಿನ 2023 ರ ಮೇ ತಿಂಗಳವರೆಗೆ ಈ ವಿಧಾನಸಭೆ ಅವಧಿ ಮುಗಿಯಲಿದೆ ಎಂದು ಭಾವಿಸುತ್ತೇನೆ. ಅಲ್ಲಿಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಮರು ಚುನಾವಣೆ ಘೋಷಣೆಯಾಗಿ 16 ನೇ ವಿಧಾನಸಭೆ ಅಸ್ಥಿತ್ವಕ್ಕೆ ಬರುವ ಅವಕಾಶ ಇದ್ದರೆ, ಅದರಲ್ಲಿ ಅವರು ಸ್ಪರ್ಧಿಸಬಹುದು. ಆಗ ಇವರ ಅನರ್ಹತೆ ಅನ್ವಯಿಸುವುದಿಲ್ಲ ಸ್ಪಷ್ಟನೆ ನೀಡಿದ್ರು.
ಇನ್ನು ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ಕ್ರಮಬದ್ಧ ರಾಜೀನಾಮೆಗಿಂತ ಮೊದಲು ಅನರ್ಹತೆಯ ದೂರು ಕಾಂಗ್ರೆಸ್ ಪಕ್ಷದಿಂದ ಸಲ್ಲಿಕೆಯಾಗಿತ್ತು. ಇದರಿಂದ ಅವರನ್ನು ವಿಚಾರಣೆಗೆ ಕರೆದರೂ ಬರಲಿಲ್ಲ. ಇದರಿಂದ ಇವರಿಬ್ಬರ ವಿರುದ್ಧ ಅನರ್ಹತೆ ನಿಲುವು ಕೈಗೊಂಡಿದ್ದೇನೆ. ಈ ಶಾಸನ ಅವಧಿಯಲ್ಲಿ ಸದನ ಪ್ರವೇಶಕ್ಕೆ ಅನರ್ಹರಾಗಿರುತ್ತಾರೆ. ಅವರು ಉಪಚುನಾವಣೆ ಎದುರಿಸುವಂತಿಲ್ಲ ಎಂದು ವಿವರಿಸಿದರು.
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ವಿಚಾರ
ಈ ಹಿಂದೆ ಮೈತ್ರಿ ಸರ್ಕಾರದ ಭಾಗವಾದ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ನೀಡಲಾಗಿತ್ತು. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ವಿರುದ್ಧ ದೂರು ದಾಖಲಿಸಿದ್ದರು. ಫೆಬ್ರವರಿಯಲ್ಲಿ ಇವರ ವಿರುದ್ಧ ದೂರು ಬಂದಿತ್ತು. ಜು.6 ಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರಿಗೂ ವಿಚಾರಣೆಗೆ ಕರೆಸಿದ್ದೆವು ಎಂದರು. ಇವರಿಬ್ಬರ ವಿರುದ್ಧ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬಂದು ಕ್ರಮಕ್ಕೆ ಮನವಿ ಮಾಡಿದ್ದರು. ಜು. 6 ಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿರಲಿಲ್ಲ. ಹೀಗಾಗಿ ನಾನು ಉಪಸ್ಥಿತನಿರಲಿಲ್ಲ. ರಮೇಶ್ ಹಾಗೂ ಮಹೇಶ್ ಜತೆ ಇತರೆ ಶಾಸಕರು ಬಂದು ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಕ್ರಮಬದ್ಧವಾಗಿ ಇರದ ಹಿನ್ನೆಲೆ, ಮತ್ತೆ ಹಾಜರಾಗಿ ಕ್ರಮಬದ್ಧವಾಗಿ ನೀಡುವಂತೆ ಇಚ್ಛೆಪಟ್ಟರೆ ನೀಡಿ ಎಂದಿದ್ದೆ. ಈ ನಡುವೆ ಸುಪ್ರೀಂ ಮೆಟ್ಟಿಲೇರಿದರು. ಇವರಿಗೆ ಅವಕಾಶ ಮಾಡಿಕೊಡಿ, ಕೈಗೊಂಡ ಕ್ರಮದ ಬಗ್ಗೆ ವಿವರಿಸಿ ಎಂದರು. ಅದಕ್ಕೆ ಸೂಕ್ತವಾಗಿ ಕ್ರಮ ಕೈಗೊಂಡಿದ್ದೇನೆ. ಅವರು ಯಾವುದೇ ವಿಚಾರಣೆಗೆ ಇದುವರೆಗೂ ಹಾಜರಾಗಿಲ್ಲ ಎಂದರು.
ಉಳಿದ ಶಾಸಕರ ರಾಜೀನಾಮೆ ವಿಚಾರವನ್ನು ಕೆಲವೇ ದಿನದಲ್ಲಿ ವಿಚಾರಣೆ ಮಾಡುತ್ತೇನೆ. ಯಾವುದೇ ವಿಳಂಬ ಆಗಲ್ಲ, ವಾರ, ತಿಂಗಳುಗಳ ಕಾಲ ಪಡೆಯಲ್ಲ ಎಂದರು.