ಬೆಂಗಳೂರು: ನಗರದಲ್ಲಿ ಮತ್ತೆ ಯುವಕರು ವ್ಹೀಲಿಂಗ್ ಶೋಕಿ ಮಾಡಲು ಮುಂದಾಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಏರ್ಪೋರ್ಟ್ ಜಿಕೆವಿಕೆ ರಸ್ತೆಯ ಬಳಿ ವ್ಹೀಲಿಂಗ್ ಮಾಡುತ್ತಾ ಬಂದಾಗ ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಸೈಯ್ಯದ್ ರಿಯಾಜ್ ಹಾಗೂ ಆದಿಲ್ ಎಂಬುವರು ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಇಂದು ಬೆಳಗ್ಗೆ 6.30ರ ಸುಮಾರಿಗೆ ಭಾನುವಾರ ರಜೆ ಹಾಗೂ ಗ್ರಹಣ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿರುವುದರಿಂದ ಖಾಲಿ ರಸ್ತೆಯಲ್ಲಿ ವ್ಹೀಲಿಂಗ್ ಸಾಹಸ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.