ಬೆಂಗಳೂರು: ಕುಡಿದ ಮತ್ತಿನಲ್ಲಿ ಮಚ್ಚಿನಿಂದ ಓರ್ವನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.
ಫೆ.28ರಂದು ರಾತ್ರಿ ಚಾಮರಾಜಪೇಟೆ ಠಾಣಾ ವ್ಯಾಪ್ತಿಯ 5 ನೇ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳಾದ ಮಂಜುನಾಥ್, ಸಂಜಯ್ ಹಾಗೂ ರಂಜಿತ್ ಎಂಬುವವರು ಗೋಪಿನಾಥ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಮೂವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರವಿ ಡಿ ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.
ಗುರಾಯ್ಸಿದ್ದಕ್ಕೆ ಮಚ್ಚಿನಿಂದ ಹಲ್ಲೆ:
ಫೆ.28ರಂದು ಬಂಧಿತ ಆರೋಪಿಗಳಾದ ಮಂಜುನಾಥ್, ಸಂಜಯ್ ಹಾಗೂ ರಂಜಿತ್, ರಸ್ತೆಯಲ್ಲಿ ನಿಂತಿದ್ದ ಗೋಪಿನಾಥ್ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ವಾಗ್ವಾದ ನಡೆಸಿದ್ದರು. ಜಗಳ ತಾರಕಕ್ಕೇರಿ ನಡು ರಸ್ತೆಯಲ್ಲೇ ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಇದರಿಂಧ ಗೋಪಿನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗೋಪಿನಾಥ್ ಜೊತೆಗಿದ್ದ ಸಹೋದರ ಗಣೇಶ್ ಈ ಬಗ್ಗೆ ಚಾಮರಾಜಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಮೂವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಸದ್ಯ ಪೋಲೀಸರು ಮೂವರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಈ ಮೊದಲು ಎರಡು ಗುಂಪುಗಳ ನಡುವೆ ಏನಾದರೂ ವೈಷಮ್ಯವಿತ್ತಾ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಚೆನ್ನಣ್ಣನವರ್ ತಿಳಿಸಿದ್ದಾರೆ. ಸದ್ಯ ಹಣದ ವಿಚಾರವಾಗಿ ಈ ಮೊದಲೇ ಗಲಾಟೆ ನಡೆದಿತ್ತು ಎನ್ನುವ ಸಂಗತಿ ತಿಳಿದು ಬಂದಿದೆ. ಆದರೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.