ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಮನೆ ಹಾಗೂ ರಸ್ತೆಗಳನ್ನು ಸೀಲ್ ಡೌನ್ ಅಥವಾ ಕಂಟೋನ್ಮೆಂಟ್ ಮಾಡಲು ಕೋಟ್ಯಾಂತರ ರೂಪಾಯಿ ವ್ಯಯಿಸಲಾಗಿದೆ. ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ಆಯುಕ್ತರು ಬಿಲ್ ಪೇಮೆಂಟ್ ತಡೆ ಹಿಡಿದಿದ್ದಾರೆ.
ವಾರ್ಡ್ ನಂಬರ್-91 ಭಾರತಿನಗರದಲ್ಲಿ ನೂರು ಮೀಟರ್ ಕಂಟೋನ್ಮೆಂಟ್ ಮಾಡಲು 14 ದಿನಕ್ಕೆ 7,26,413 ರೂಪಾಯಿ ಬಾಡಿಗೆ ನಿಗದಿ ಮಾಡಿ ಡಿಸಿ ಬಿಲ್ಗೆ ಕೆಳಹಂತದ ಅಧಿಕಾರಿ ಕಳುಹಿಸಿದ ದಾಖಲೆ ಬಯಲಾಗಿತ್ತು. ದಿನಕ್ಕೆ 69,143 ಸಾವಿರ ಬಾಡಿಗೆಯಂತೆ 14 ದಿನಕ್ಕೆ 7,26,413 ರೂ. ಬಾಡಿಗೆ ಅದರಲ್ಲಿ ನಿಗದಿ ಮಾಡಲಾಗಿತ್ತು. ಕೇವಲ ನಾಲ್ಕು ತಗಡು, ಒಂದೆರಡು ಕಂಬಕ್ಕೆ ಲಕ್ಷ ಲಕ್ಷ ಬಿಲ್ ಆದರೆ, ಬೆಂಗಳೂರಲ್ಲಿ ಒಟ್ಟು 28,889 ಕಂಟೋನ್ಮೆಂಟ್ ಜೋನ್ಸ್ಗಳಿಗೆ ತಗಲುವ ವೆಚ್ಚದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ಮೂಡಿತ್ತು.
ಈ ಹಿನ್ನೆಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಈವರೆಗೆ ಅಂದಾಜು 20 ರಿಂದ 25 ಕೋಟಿ ರೂ. ವೆಚ್ಚವಾಗಿರುವ ಸಾಧ್ಯತೆ ಇದೆ. ರಾಜರಾಜೇಶ್ವರಿ ವಲಯದಲ್ಲಿ ಕಳೆದ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅಂದಾಜು 1.50 ಕೋಟಿ ರೂ. ಕಂಟೋನ್ಮೆಂಟ್ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಪ್ರತಿ ವಲಯದಲ್ಲೂ 1.50 ರಿಂದ 2 ಕೋಟಿ ರೂ. ಕಂಟೋನ್ಮೆಂಟ್ ನಿರ್ಮಾಣಕ್ಕೆಂದೇ ವೆಚ್ಚವಾಗಿದ್ದಲ್ಲಿ ಅಥವಾ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿಯೂ ನಿಗದಿ ಮಾಡಿದ್ದಲ್ಲಿ ಪಾಲಿಕೆಯಿಂದ ಅಂದಾಜು 20ರಿಂದ 25 ಕೋಟಿರೂ.ವೆಚ್ಚವಾಗಿರುವ ಸಾಧ್ಯತೆ ಇದೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ಕೆಲವು ಸಹಾಯಕ ಎಂಜಿನಿಯರ್ಗಳು ಕಂಟೋನ್ಮೆಂಟ್ ಮಾಡುವುದಕ್ಕೆ ಬೇಕಾದ ಶೀಲ್ಡ್ ಹಾಗೂ ಮರದ ಕಂಬಗಳನ್ನು ಎಸ್‍ಆರ್ ದರದಲ್ಲಿ ಖರೀದಿಸಿ, ಅದನ್ನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ಪುರ್ನರ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ಕಂಟೋನ್ಮೆಂಟ್ ಪದ್ಧತಿ ಜಾರಿಯಾದಾಗಿನಿಂದ ಯಾವ ರೀತಿ ಕೊಟೇಷನ್ ಕೊಡಲಾಗಿದೆ. ಇದಕ್ಕಾಗಿ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಸಂಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಕೊಟೇಶನ್ ಇಲ್ಲದೆ ಅನುಮೋದನೆ ಆಗಿದ್ದರೆ, ಅಂತಹ ಬಿಲ್ಗಳನ್ನು ಪಾವತಿ ಮಾಡದಂತೆ ಈಗಾಗಲೇ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಈಗಾಗಲೇ ವಲಯವಾರು ವರದಿ ಕೇಳಿದ್ದು, ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.