ಬೆಂಗಳೂರು: ಚಿನ್ನ ಮಾರಾಟ ಮಾಡುವುದಾಗಿ ಹಿಂದೂಸ್ತಾನ್ ಗೋಲ್ಡ್ ಕಂಪನಿ ಕಾಲ್‌ಸೆಂಟರ್‌ಗೆ ಕರೆ ಮಾಡಿ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡು 2.60 ಲಕ್ಷ ರೂ. ಪಡೆದು ನಂತರ ಆರೋಪಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಂಪನಿಯ ಟ್ರಾನ್‌ಜೆಕ್ಷನ್ ಎಕ್ಸಿಕ್ಯೂಟಿವ್ ಚಂದನ್ ಕೊಟ್ಟ ದೂರಿನ ಆಧಾರದ ಮೇಲೆ ಆಂಧ್ರಹಳ್ಳಿ ನಿವಾಸಿಯಾದ ವಿವೇಕ್ (25) ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ: ಜುಲೈ 17ರಂದು ಸಂಜೆ ಹಿಂದೂಸ್ತಾನ್ ಗೋಲ್ಡ್ ಕಂಪನಿಯ ಕಾಲ್‌ಸೆಂಟರ್‌ಗೆ ಕರೆ ಮಾಡಿದ ಆರೋಪಿ, ತನ್ನನ್ನು ವಿವೇಕ್ ಎಂದು ಪರಿಚಯಿಸಿಕೊಂಡಿದ್ದ. ತನ್ನ ಬಳಿ 121 ಗ್ರಾಂ ಚಿನ್ನಾಭರಣಗಳಿದ್ದು, ಈ ಪೈಕಿ 88 ಗ್ರಾಂ ನನಗೆ ಪರಿಚಯವಿರುವ ಮಾರವಾಡಿ ಅಂಗಡಿಯಲ್ಲಿ ಅಡವಿರಿಸಿದ್ದೇನೆ. ಆ ಚಿನ್ನವನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದ. ನಂತರ ಕಂಪನಿಯ ಸಿಬ್ಬಂದಿ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಅಡಮಾನವಿಟ್ಟ ರಶೀದಿಗಳನ್ನು ನೀಡುವಂತೆ ಸೂಚಿಸಿದ್ದರು.
ಇದಕ್ಕೆ ಒಪ್ಪದ ಆರೋಪಿ ನನ್ನ ಮನೆಗೆ ನಿಮ್ಮ ಸಿಬ್ಬಂದಿಯನ್ನು ಕಳುಹಿಸಿ ಹಣ ಕೊಟ್ಟರೆ ಚಿನ್ನಾಭರಣ ನೀಡುವುದಾಗಿ ಹೇಳಿದ್ದ. ಅದರಂತೆ ಜು.18 ರಂದು ಬೆಳಗ್ಗೆ ದೂರುದಾರ ಚಂದನ್ ಆಂಧ್ರಹಳ್ಳಿಯಲ್ಲಿರುವ ಆರೋಪಿಯ ಮನೆಗೆ ಹೋಗಿ ದಾಖಲೆ ನೀಡಲು ಸೂಚಿಸಿದ್ದರು. ದಾಖಲೆಗಳು ಬೀರುವಿನಲ್ಲಿದ್ದು, ನೀವು ಹಣ ಕೊಟ್ಟರೆ ನಮ್ಮ ತಾಯಿಯನ್ನು ಕಳುಹಿಸಿ ಅಡಮಾನ ಇಟ್ಟಿರುವ ಚಿನ್ನ ಬಿಡಿಸಿಕೊಂಡು ಬರುವುದಾಗಿ ಹೇಳಿದ್ದ.
ಆರೋಪಿ ವಿವೇಕ್‌ನ ಮಾತಿಗೆ ಮರುಳಾದ ಚಂದನ್, 2.60 ಲಕ್ಷ ರೂ. ಆತನ ತಾಯಿಯ ಕೈಗೆ ಕೊಟ್ಟಿದ್ದರು. ಹಣ ತೆಗೆದುಕೊಂಡು ಹೋದ ಮಹಿಳೆ ಮಧ್ಯಾಹ್ನವಾದರೂ ಮನೆಗೆ ವಾಪಸ್ ಆಗಿಲ್ಲ. ಹಣ ಹಿಂತಿರುಗಿಸಿದರೆ ನಾನು ಹೋಗುತ್ತೇನೆ ಎಂದು ಚಂದನ್ ಆರೋಪಿ ಬಳಿ ಹೇಳಿದ್ದರು. ಅರ್ಧ ಗಂಟೆ ಮನೆಯಲ್ಲಿ ಕಾಯಿರಿ ಎಂದು ಹೇಳಿ ವಿವೇಕ್ ಸಹ ಹೊರ ಹೋಗಿದ್ದ. ಇತ್ತ ಸಂಜೆವರೆಗೂ ಕಾದು ಕಾದು ಸುಸ್ತಾದ ಚಂದನ್, ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ತಾನು ಮೋಸ ಹೋಗಿರುವುದನ್ನು ಮನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಾಗ ಸಿಮ್‌ಕಾರ್ಡ್ ಬದಲಿಸುವ ಐನಾತಿ:
ಬ್ಯಾಡರಹಳ್ಳಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿಯು 2018 ರಲ್ಲಿ ಹಿಂದೂಸ್ತಾನ್ ಗೋಲ್ಡ್ ಕಂಪನಿಗೆ ಈ ಮಾದರಿಯಲ್ಲಿ ವಂಚಿಸಿರುವುದು ತಿಳಿದು ಬಂದಿದೆ. ಮಾದನಾಯಕನಹಳ್ಳಿ ಪೊಲೀಸರು ಆಗ ಈತನನ್ನು ಬಂಧಿಸಿ ಜೈಲಿಗಟ್ಟಿ ಚಿನ್ನಾಭರಣ ಜಪ್ತಿ ಮಾಡಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ಬಳಿಕ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ. ತನ್ನ ಸುಳಿವು ಸಿಗಬಾರದೆಂದು ವಾರಕ್ಕೊಂದು ಸಿಮ್‌ಕಾರ್ಡ್ ಬಳಕೆ ಮಾಡಿ ಆಗಾಗ ವಾಸ್ತವ್ಯವನ್ನು ಬದಲಾಯಿಸುತ್ತಿರುತ್ತಾನೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಆರೋಪಿಯ ಆಂಧ್ರಹಳ್ಳಿಯಲ್ಲಿರುವ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದೇ ಮೌಲ್ಯಯುತ ವಸ್ತುಗಳು ಸಿಕ್ಕಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.