ಬೆಂಗಳೂರು: ಮಾಜಿ ಶಾಸಕ ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಶಿವಾಜಿನಗರ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ರಿಜ್ವಾನ್ ಅರ್ಷದ್, ಜೆಡಿಎಸ್ನಿಂದ ತನ್ವೀರ್ ಅಹ್ಮದ್ ಉಲ್ಲಾ, ಬಿಜೆಪಿಯಿಂದ ಶರವಣ, ಕನ್ನಡ ಚಳುವಳಿ ಪಕ್ಷದಿಂದ ವಾಟಾಳ್ ನಾಗರಾಜ್ ಹಾಗೂ ಒಬ್ಬ ರೌಡಿ ಶೀಟರ್ ಸೇರಿದಂತೆ 17 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಕುರಿತು ಸೋಮವಾರ ಸ್ಪಷ್ಟೀಕರಣ ನೀಡುವುದಾಗಿ ಹೇಳಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರು ಎಲ್ಲೂ ಕಾಣಿಸಿಕೊಂಡಿಲ್ಲ.
ಬೆಳಗ್ಗೆ 10ಕ್ಕೆ ಶಿವಾಜಿನಗರ ಚರ್ಚ್ನಿಂದ ಬಿಬಿಎಂಪಿ ಕಚೇರಿವರೆಗೂ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಉಲ್ಲಾ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದರು.
ಬೆಳಿಗ್ಗೆ 10 ಗಂಟೆಗೆ ಶಿವಾಜಿನಗರದ ತಿರುವಳ್ಳರ್ ಪ್ರತಿಮೆಗೆ ಮಾಲಾರ್ಪಣೆ, ನಾಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶರವಣ, ಸಾವಿರಾರು ಅಭಿಮಾನಿಗಳ ಜೊತೆ ಮೆರವಣಿಗೆ ಮೂಲಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಂಸದ ಪಿ.ಸಿ.ಮೋಹನ್ ಸಾಥ್ ಕೊಟ್ಟರು.
ರಿಜ್ವಾನ್ ಅರ್ಷದ್ ಮಧ್ಯಾಹ್ನ 12ಗಂಟೆಗೆ ದರ್ಗಾಗೆ ಭೇಟಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು. ಶಾಸಕರಾದ ಎನ್.ಎ.ಹ್ಯಾರೀಸ್, ಜಮೀರ್ ಅಹಮದ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.
ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗೆ ಸಾಥ್ ನೀಡಿ ತಮ್ಮ ಬಲ ಹೆಚ್ಚಿಸಿದರು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಿರಿಯ ನಾಯಕರ ದಂಡೇ ಇದ್ದರೂ ತಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ತಲೆಯೇ ಹಾಕಲಿಲ್ಲ. ವಾಟಾಳ್ ನಾಗರಾಜ್ ಕೆಲವೇ ಬೆಂಬಲಿಗರೊಂದಿಗೆ ಆಗಮಿಸಿ ಸದ್ದಿಲ್ಲದೆ ನಾಮಪತ್ರ ಸಲ್ಲಿಸಿ ಅಲ್ಲಿಂದ ಕಾಲ್ಕಿತ್ತರು.
ದರ್ಗಾದ ಬಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೆರವಣಿಗೆ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಮೆರವಣಿಗೆಗೆ ಅನುಕೂಲ ಮಾಡಿಕೊಟ್ಟರು.
ಬಿಬಿಎಂಪಿ ಕಚೇರಿಯ ಮುಂದೆ ಸೇರಿದ ಮೂರು ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಬಾವುಟಗಳು ಹಾರಾಟ ಮಾಡುತ್ತಿರುವುದು ಗಮನ ಸೆಳೆಯಿತು. ಆದರೆ ಅಲ್ಲಿನ ಸುತ್ತಮುತ್ತಲಿನ ಪ್ರದೇಶ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಳಿಗೂ ಕಾಲ ಸವಾರರು ಪರದಾಡುವಂತಾಯಿತು. ಸವಾರರು ಶಾಪ ಹಾಕುತ್ತಲೇ ಮುನ್ನಡೆದರು.