ಬೆಂಗಳೂರು: ನಗರದಲ್ಲಿ ನಡೆಯುವ ಅಪರಾಧವನ್ನು ತಹಬದಿಗೆ ತಂದು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಸಿಬಿಗೆ ಹೆಚ್ಚುವರಿಯಾಗಿ ಓರ್ವ ಡಿವೈಎಸಿಪಿ, ಮೂವರು ಇನ್ಸ್ಪೆಕ್ಟರ್ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪೊಲೀಸ್ ಹುತಾತ ದಿನ ಅಂಗವಾಗಿ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಅಮರವೀರ ಭಾವಚಿತ್ರ ಪ್ರದರ್ಶನ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಎರಡು ಠಾಣೆಗಳ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಗಲಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಗೋವಿಂದಪುರ ಪೊಲೀಸ್ ಠಾಣೆ ನಿರ್ಮಿಸಲಾಗುವು ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಠಾಣೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕುತ್ತೇವೆ ಎಂದರು.
ಈ ಮೂರು ಠಾಣೆಗಳಿಗೆ ಉಪವಿಭಾಗ ಸೃಷ್ಟಿಸಿ ಎಸಿಪಿ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಿಸಲು ಮಂಜೂರಾತಿ ನೀಡಿದ್ದೇವೆ ಎಂದರು. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಚುನಾವಣೆ ಶಾಂತವಾಗಿ ನಡೆಯಬೇಕು ಮತದಾರರು ನಿರ್ಭಯವಾಗಿ ಮತದಾನ ಮಾಡಬೇಕು. ಕಾನೂನು ಸುವ್ಯವಸ್ಥೆಯಾಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.