ಬೆಂಗಳೂರು: ಉದ್ಯೋಗದಲ್ಲಿ 1% ಮೀಸಲಾತಿಯನ್ನು ತೃತೀಯ ಲಿಂಗಿಗಳಿಗೆ ನೀಡುವ ಸಂಬಂಧ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.
ಈ ಸಂಬಂಧ ನಿಯಮ ರೂಪಿಸಿರುವ ಸರ್ಕಾರ, ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಸೇರಿ ಪ್ರತಿಯೊಂದು ವಿಭಾಗದಲ್ಲೂ ಶೇ.1ರಷ್ಟು ಹುದ್ದೆಯನ್ನು ತೃತೀಯ ಲಿಂಗಿಗಳ ಸಮುದಾಯಕ್ಕೆ ಮೀಸಲಿಡುವ ಸಂಬಂಧ ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ.
ತಿದ್ದುಪಡಿ ನಿಯಮದಂತೆ ಪ್ರತಿ ನೇಮಕಾತಿ ಪ್ರಾಧಿಕಾರವು ಗ್ರೂಪ್ ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಅರ್ಜಿಯಲ್ಲಿ, ತೃತೀಯ ಲಿಂಗದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪುರುಷ ಲಿಂಗ ಮತ್ತು ಸ್ತ್ರೀ ಲಿಂಗಗಳ ಜೊತೆಗೆ ಇತರೆ ಎಂಬ ಪ್ರತ್ಯೇಕ ಕಾಲಂ ಅನ್ನು ಕಲ್ಪಿಸಬೇಕು. ಯಾವುದೇ ಆಯ್ಕೆ ಪ್ರಾಧಿಕಾರ ಅಥವಾ ನೇಮಕಾತಿ ಪ್ರಾಧಿಕಾರವು ಯಾವುದೇ ವರ್ಗದ ಹುದ್ದೆಗಳಿಗೆ ಮಾಡುವ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ತೃತೀಯ ಲಿಂಗದ ಅಭ್ಯರ್ಥಿಗೆ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ತೃತೀಯ ಲಿಂಗದ ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಒಂದು ಶೇಕಡಾವಾರು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದಲ್ಲಿ ಅಂಥ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು ಎಂದು ನಿಯಮದಲ್ಲಿ ತಿಳಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ1977ಗೆ ಮತ್ತಷ್ಟು ತಿದ್ದುಪಡಿ ಸಂಬಂಧ ಕರಡು ನಿಯಮಗಳನ್ನು ಮೇ. 13ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು, ಆಹ್ವಾನಿಸಲಾಗಿತ್ತು. ಇದೀಗ ಈ ಸಂಬಂಧ ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಿದೆ.