ಬೆಂಗಳೂರು: ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಖಂಡಿಸಿರುವ ಹೈಕೋರ್ಟ್, ಮಂಡಳಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
ನಗರದ ‘ಎಸಿವಿ ಏರೋ ಇಂಡಸ್ಟ್ರೀಸ್’ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅರ್ಜಿದಾರರಿಗೆ ಕ್ರಯಪತ್ರ ಮಾಡಿಕೊಡಲು ವಿಳಂಬ ಮಾಡಿರುವ ಕೆಐಎಡಿಬಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ಇತರ ಭೂಸ್ವಾಧೀನ ಪ್ರಕರಣಗಳಲ್ಲಿ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಭೂಮಿ ಬಿಟ್ಟುಕೊಟ್ಟು ಕ್ರಯಪತ್ರ ಮಾಡಿಕೊಟ್ಟಿರುವ ಕೆಐಎಡಿಬಿ, ಅರ್ಜಿದಾರರಿಗೆ ಕ್ರಯಪತ್ರ ಮಾಡಿಕೊಡದೆ ಸತಾಯಿಸಿದೆ. ಮಂಡಳಿಯ ಈ ವರ್ತನೆ ತಾರತಮ್ಯದಿಂದ ಕೂಡಿದೆ. ಆದ್ದರಿಂದ ಮಂಡಳಿ ಕೂಡಲೇ ಅರ್ಜಿದಾರರಿಗೆ ಮಾರಾಟ ಕ್ರಯಪತ್ರ ಮಾಡಿಕೊಡಬೇಕು. ಜೊತೆಗೆ ಲೋಪವೆಸಗಿದ ಕಾರಣಕ್ಕೆ ಅರ್ಜಿದಾರರಿಗೆ 1 ಲಕ್ಷ ರೂ. ಪಾವತಿಸಬೇಕು ಎಂದು ಆದೇಶಿಸಿದೆ. ಹಾಗೆಯೇ 2013ರ ಡಿ.31ರಂದು ಕೆಐಎಡಿಬಿ ಅರ್ಜಿದಾರರೊಂದಿಗೆ ಮಾಡಿಕೊಂಡಿದ್ದ ಲೀಸ್ ಕಮ್ ಸೇಲ್ ಒಪ್ಪಂದವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಅರೆಬಿನ್ನಮಂಗಲ ಗ್ರಾಮದ ಸರ್ವೇ ಸಂಖ್ಯೆ 101ರಲ್ಲಿ 6 ಎಕರೆ ಹಾಗೂ ಸರ್ವೇ ಸಂಖ್ಯೆ 102ರಲ್ಲಿ 6 ಎಕರೆ ಸೇರಿ ಅರ್ಜಿದಾರರಿಗೆ ಸೇರಿದ ಒಟ್ಟು 12 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹಾಗೂ 2008ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಸ್ವಾಧೀನಪಡಿಸಿಕೊಳ್ಳುವ 12 ಎಕರೆ ಭೂಮಿಗೆ ಪರಿಹಾರದ ರೂಪದಲ್ಲಿ ಅಭಿವೃದ್ಧಿಪಡಿಸಲಾದ 6 ಎಕರೆ ಜಮೀನು ಬಿಟ್ಟುಕೊಡುವುದಾಗಿ ಮಂಡಳಿ ಅರ್ಜಿದಾರರಿಗೆ ಭರವಸೆ ನೀಡಿತ್ತು.
ಓದಿ: ಸೇಫ್ ಸಿಟಿ ಯೋಜನೆ ಪ್ರಕ್ರಿಯೆಯಲ್ಲಿ ಅವ್ಯವಹಾರ: ಎಫ್ಐಆರ್ ದಾಖಲಿಸದೆ ಸಿಬಿಐ ತನಿಖೆಗೆ ವಹಿಸಲಾಗದು ಎಂದ ಕೋರ್ಟ್
ಆದರೆ, ಇತರ ಭೂಸ್ವಾಧೀನ ಪ್ರಕರಣಗಳಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಬಿಟ್ಟುಕೊಟ್ಟು ಕ್ರಯಪತ್ರಮಾಡಿಕೊಟ್ಟಿದ್ದ ಮಂಡಳಿ, ಅರ್ಜಿದಾರರಿಗೆ ಕ್ರಯಪತ್ರ ಮಾಡಿಕೊಟ್ಟಿರಲಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪರಿಹಾರ ನೀಡದೆ ಸತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸಂಸ್ಥೆ ಮಂಡಳಿಯ ವಿರುದ್ಧ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.