ಬಳ್ಳಾರಿ: ಪ್ರಾಣಿಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡುವ ಪ್ರಾಣಿಪ್ರಿಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರವು ಝೂಸ್ ಆಫ್ ಕರ್ನಾಟಕ ಎಂಬ ಆ್ಯಪ್ ರೂಪಿಸಿದ್ದು, ಅದರ ಮೂಲಕ ರಾಜ್ಯದ 9 ಮೃಗಾಲಯಗಳಲ್ಲಿ ಇರುವ ಪ್ರಾಣಿಗಳ ಮಾಹಿತಿ ಪಡೆಯಬಹುದು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ 'ವಿಶ್ವ ಹುಲಿ ದಿನ'ದ ಅಂಗವಾಗಿ ಜು.29ರಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಆ್ಯಪ್‌ಗೆ ಚಾಲನೆ ನೀಡಿದರು. ಈ ಆ್ಯಪ್ ಅನ್ನು ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೈಸೂರು, ಬನ್ನೇರುಘಟ್ಟ, ಶಿವಮೊಗ್ಗ ಸೇರಿ 9 ಪ್ರಾಣಿ ಸಂಗ್ರಹಾಲಯಗಳ ಮಾಹಿತಿ ಇದರಲ್ಲಿದೆ.
ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ನಮಗೆ ಬೇಕಾದ ಪ್ರಾಣಿಗಳನ್ನು ದತ್ತು ಪಡೆಯಬಹುದು. ಅಲ್ಲದೆ, ಪ್ರಾಣಿಗಳ ಸಂರಕ್ಷಣೆಗೆ ಸಹಾಯಧನ (₹50 ಮೇಲ್ಪಟ್ಟು) ಕೂಡ ನೀಡಬಹುದು. ಈ ಹಿಂದೆ ಪ್ರಾಣಿಪ್ರಿಯರು, ಗಣ್ಯರಿಗೆ ಮಾತ್ರ ಪ್ರಾಣಿಗಳನ್ನು ದತ್ತು ಪಡೆಯುವ ಅವಕಾಶವಿತ್ತು. ಆ್ಯಪ್ ಬಿಡುಗಡೆಯಾದ ನಂತರ ಈಗ ಎಲ್ಲರಿಗೂ ಮುಕ್ತ ಅವಕಾಶ ದೊರೆತಿದೆ. ದತ್ತು ಪಡೆದರೆ ಪ್ರಮಾಣ ಪತ್ರ ಬರಲಿದೆ.
ಜುಲೈ 29ರಂದು ಈ ಆ್ಯಪ್‌ಗೆ ನೀಡುವ ಚಾಲನೆ ಕಾರ್ಯಕ್ರಮಕ್ಕೆ ಅರಣ್ಯ ಖಾತೆ ಆನಂದ್ ಸಿಂಗ್ ತಮ್ಮ ಮನೆಯಿಂದಲೇ ಆನ್ಲೈನ್ ವಿಡಿಯೋ ಮೂಲಕ ಸಾಥ್ ನೀಡಿದ್ದರು. ಹಂಪಿ ಮೃಗಾಲಯದಲ್ಲಿ ಸಿಂಧು ಎಂಬ ಹೆಣ್ಣು ಹುಲಿಯನ್ನು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಅಲ್ಲದೆ, ಕೆಲವರು ಅವರ ಮಾರ್ಗದರ್ಶನದಲ್ಲಿ ಪ್ರಾಣಿ ದತ್ತು ಪಡೆಯುತ್ತಿದ್ದು, ಈಗಾಗಲೇ 50ಕ್ಕೂ ಹೆಚ್ಚು ಜನರು ಆ್ಯಪ್ ಮೂಲಕವೇ ಹಣ ಸಂದಾಯ ಮಾಡಿದ್ದಾರೆ.
ಆ್ಯಪ್ ಮೂಲಕ ಪ್ರಾಣಿಗಳನ್ನು ದತ್ತು ಪಡೆದು ನೆರವಾಗಬೇಕು. ಧನಸಹಾಯ ಒದಗಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಮೃಗಾಯಲದ ಡಿಸಿಎಫ್ ಕಿರಣ ಕಮಲಾಪೂರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.