ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಜಿಲ್ಲೆಯ ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯ ಸಿಪಿಐ ಗಾಯತ್ರಿ ಹಾಗೂ ಕೌಲ್ ಬಜಾರ್ ಸಿಪಿಪಿ ನೇತೃತ್ವದ ಸಿಬ್ಬಂದಿ ಮತ ಎಣಿಕೆ ಕೇಂದ್ರಕ್ಕೆ ಭದ್ರತೆ ಒದಗಿಸಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಅಂದಾಜು 2,36,154 ಮತದಾರರಿದ್ದು, 1,15,691 ಪುರುಷರು, 1,20,400 ಮಹಿಳೆಯರು, 63 ಇತರೆ ಮತದಾರರಿದ್ದಾರೆ.
ಕ್ಷೇತ್ರದ ಉಪಚುನಾವಣೆಯಲ್ಲಿ ಶೇ. 64.94ರಷ್ಟು ಮತದಾನ ಆಗಿದೆ. 1,53,951 ಮಂದಿ ಮತದಾನ ಮಾಡಿದ್ದಾರೆ. ಪುರುಷ- 1,16,080ರಲ್ಲಿ 76,043, ಮಹಿಳಾ 1,20,909 ರಲ್ಲಿ 77,902, ಇತರೆ 62ರಲ್ಲಿ 6 ಮಂದಿ ಮತ ಚಲಾಯಿಸಿದ್ದಾರೆ. ಸದ್ಯ ಉಪ ಸಮರದ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಫಲಿತಾಂಶ ಡಿ. 9ರಂದು ಹೊರಬೀಳಲಿದೆ.
ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಅಬ್ದುಲ್ ವಹಾಬ್ ನೇತೃತ್ವದ ತಂಡ ಕೂಡ ಮತಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಕೆ. ರಾಮಲಿಂಗಪ್ಪ ಕೂಡ ಮಾಧ್ಯಮ ಕೇಂದ್ರದ ತಾಂತ್ರಿಕ ಕಾರ್ಯಗಳನ್ನು ವೀಕ್ಷಣೆ ಮಾಡಿದರು.