ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಟ್ಟಿದ್ರೆ, ಇಡೀ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿಯಾಗುತ್ತೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಎಚ್ಚರಿಕೆ ನೀಡಿದ್ದಾರೆ.
ಕೊಟ್ಟೂರುಸ್ವಾಮಿ ಮಠದಲ್ಲಿ ಮಾತನಾಡಿದ ಅವರು, ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ, ಇಡೀ ವೀರಶೈವ ಲಿಂಗಾಯತ ಸಮಾಜ ಬಿಜೆಪಿ ವಿರುದ್ಧ ತಿರುಗಿ ಬೀಳಲಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು. ಒಂದು ವೇಳೆ ಬಿಜೆಪಿ ನಾಯಕರು ಈ ತಪ್ಪು ಮಾಡಿದರೆ, ರಾಜ್ಯದ ಜನರು ದಂಗೆ ಏಳಲಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಯಡಿಯೂರಪ್ಪ ಅವರಿಂದ. ಮುಖ್ಯಮಂತ್ರಿ ಮಾಡುವಾಗಲೇ ಅವರಿಗೆ 75 ವರ್ಷ ವಯಸ್ಸಾಗಿತ್ತು. ಈಗ ಅವರಿಗೆ ವಯಸ್ಸಾಗಿದೆ ಅಂದ್ರೆ, ಇಡೀ ಕರ್ನಾಟಕ ದಂಗೆ ಏಳುತ್ತದೆ. ವಯಸ್ಸಿನ ಕಾರಣ ಮುಂದಿಟ್ಟು ತೆಗೆಯುವುದು ತಪ್ಪು. ಯಡಿಯೂರಪ್ಪ ಪ್ರಯತ್ನ ಮಾಡದಿದ್ದರೆ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಇರುತ್ತಿರಲಿಲ್ಲ. ಬಿಜೆಪಿಗೆ ಇಡೀ ರಾಜ್ಯದ ಲಿಂಗಾಯತ ಸಮುದಾಯ ತಿರುಗಿ ಬೀಳಲಿದೆ ಎಂದರು.
ಯಡಿಯೂರಪ್ಪರನ್ನು ಎಲ್ಲ ಸಮಾಜದವರು ಒಪ್ಪಿಕೊಂಡಿದ್ದಾರೆ. ಎಲ್ಲರಿಗೂ ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನಾಯಕ ಆಗಿದ್ದರೂ ಯಡಿಯೂರಪ್ಪ ಪರ ಮಾತನಾಡುತ್ತಾರೆ. ವಿಜಯಪುರದ ಕಾಂಗ್ರೆಸ್ ಶಕ್ತಿ ಎಂ.ಬಿ.ಪಾಟೀಲ್ ಯಡಿಯೂರಪ್ಪ ಬದಲಾವಣೆ ಬೇಡ ಅಂತಿದ್ದಾರೆ. ಇಂತಹ ಸಮಯದಲ್ಲಿ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಮುಂದಾಗಿರುವುದು ಖಂಡನೀಯ ಎಂದರು.
ಇದನ್ನೂ ಓದಿ: ಸಿಎಂ B.S.ಯಡಿಯೂರಪ್ಪ ನಗರ ಪ್ರದಕ್ಷಿಣೆ.. ಹಲವೆಡೆ ಟ್ರಾಫಿಕ್ ಜಾಂ!