ಬಳ್ಳಾರಿ : ರಾಜ್ಯ ಸಾರಿಗೆ ಇಲಾಖೆ ಭಾರೀ ನಷ್ಟದಲ್ಲಿದೆ. ಅದನ್ನ ಸರಿದೂಗಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು. ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಇಂದು ಭೇಟಿ ನೀಡಿ ಕೆಲಕಾಲ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 2020-21ನೇ ಸಾಲಿನಲ್ಲಿ ಅಂದಾಜು 1,200 ಕೋಟಿ ಹಾಗೂ 2021-22ನೇ ಸಾಲಿನಲ್ಲಿ ಅಂದಾಜು 510 ಕೋಟಿ ರೂ. ನಷ್ಟದಲ್ಲಿದೆ.
ಅದನ್ನ ಸರಿದೂಗಿಸಲು ಆಡಳಿತದಲ್ಲಿ ಏನೇನು ಬದಲಾವಣೆ ತರಬೇಕೆಂಬ ಚಿಂತನೆ ಕೂಡ ನಡೆದಿದೆ. ಇದಲ್ಲದೇ, ಎಲೆಕ್ಟ್ರಿಕ್ ಬಸ್ಗಳನ್ನ ಓಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಭಾರೀ ಪ್ರಮಾಣದ ನಷ್ಟದಲ್ಲಿರುವ ರಾಜ್ಯ ಸಾರಿಗೆ ಸಂಸ್ಥೆಯನ್ನ ಲಾಭದತ್ತ ಕೊಂಡೊಯ್ಯಬೇಕಿದೆ. ಇದಕ್ಕೆ ಬೇಕಾದ ಕ್ರಮಕ್ಕೆ ಮುಂದಾಗಿದ್ದೇನೆ. ಶೇ.70ರಷ್ಟು ಮಂದಿ ಈ ರಾಜ್ಯ ಸಾರಿಗೆ ಬಸ್ಗಳನ್ನ ಅವಲಂಬಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಂದಾಜು ರೂ.510.24 ಕೋಟಿಯಷ್ಟು ಸಾರಿಗೆ ಇಲಾಖೆ ನಷ್ಟದಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಬಸ್ಗಳನ್ನ ಸ್ಕ್ರಾಬ್ ಮಾಡುವ ಯೋಜನೆಯನ್ನು ಜಾರಿಗೆ ತಂದಿರುವುದು ತುಂಬಾ ಚೆನ್ನಾಗಿದೆ. ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಜನರಿಗೆ ಹೊರೆ ಮಾಡಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಸಚಿವ ಆನಂದ್ ಸಿಂಗ್ ಜತೆ ಮಾತನಾಡಿರುವೆ : ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಜತೆ ನಿನ್ನೆ ನಾನು ಮಾತನಾಡಿದ್ದೇನೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಗೆ ತೆರಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಆ.16ರಂದು ಆನಂದ್ ಸಿಂಗ್ ಅವರು ದೆಹಲಿಗೆ ತೆರಳಬಹುದು.
ಮುಖ್ಯಮಂತ್ರಿ ಮಾತನಾಡಿದ್ದಾರೆ. ಏನಾಗುತ್ತಿದೆ ಎಂದು ಕಾದು ನೋಡೋಣ. ಆನಂದ್ ಸಿಂಗ್ ಅವರಿಗೆ ಅಸಮಾಧಾನ ಇರುವುದು ನಿಜ. ಹಾಗಂತಾ, ಯಾವ ಇಲಾಖೆಯೂ ಕಡಿಮೆ ಏನಲ್ಲ. ಅದು ಶೀಘ್ರದಲ್ಲೇ ಸರಿಹೋಗುತ್ತದೆ ಎಂದರು. ಇಂದಿರಾ ಕ್ಯಾಂಟೀನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಹಿರಿಯರು ಮಾತನಾಡುತ್ತಾರೆ. ಸಾರ್ವಜನಿಕರಿಗೆ ಒಳ್ಳೆಯದಾದರೆ ಸಾಕು ಎಂದರು.
ಇದನ್ನೂ ಓದಿ: ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್: ಸಿದ್ದರಾಮಯ್ಯ