ಬಳ್ಳಾರಿ: ಕಾರು ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ವಿರುಪಾಪುರ ಗ್ರಾಮದ ಬಳಿ ನಡೆದಿದೆ.
ವಸಂತ ಕುಮಾರ್ (37), ಪತ್ನಿ ವಿನುತ (30) ಹಾಗೂ ಇನ್ನೋರ್ವ ಮೃತಪಟ್ಟಿದ್ದು, ವಸಂತ ಕುಮಾರ್ ಮಗಳು ರುತ್ವಿಕಾ (2) ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಇಳಕಳ್ ಮೂಲದವರಾದ ವಸಂತ ಕುಮಾರ್, ಮಡೀಕೆರಿಯ ಮೂರ್ನಾಡುನಲ್ಲಿ ಶಿಕ್ಷಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಳಕಳ್ನಲ್ಲಿ ವಸಂತ ಕುಮಾರ್ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳುವಾಗ ಈ ಘಟನೆ ನಡೆದಿದೆ.
ಮಾನವೀಯತೆ ಮೆರೆದ ಶಿಕ್ಷಕಿ:
ಶಿಕ್ಷಕಿಯೋರ್ವರು ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಹೊರಟಿದ್ದ ವೇಳೆ ಘಟನಾ ಸ್ಥಳದಲ್ಲಿ ಹೆತ್ತ ತಂದೆ, ತಾಯಿಯನ್ನು ಕಳೆದುಕೊಂಡು ರೋದಿಸುತ್ತಿದ್ದ ರುತ್ವಿಕಾಳನ್ನು ಆಸ್ಪತ್ರಗೆ ಕರೆ ತಂದು ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆದಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.