ಬಳ್ಳಾರಿ: ನಗರದ ಶೆಟ್ರು ಗುರುಶಾಂತಪ್ಪ ಪದವಿ ಪೂರ್ವ ಕಾಲೇಜಿನ 1980 - 85ನೇ ಸಾಲಿನ 8, 9, 10 ಮತ್ತು ಪಿಯುಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಮತ್ತು ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಒಂದುಗೂಡಿದ್ದ ಗುರು - ಶಿಷ್ಯರು ವಿದ್ಯಾರ್ಥಿ ದೆಸೆಯ ಹಲವಾರು ನೆನೆಪುಗಳನ್ನು ಮೆಲುಕು ಹಾಕಿದರು.
ಯೋಗಕ್ಷೇಮ ವಿಚಾರಿಸಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಶಿಕ್ಷಕರೊಂದಿಗೆ ಭೋದಕೇತರ ಸಿಬ್ಬಂದಿಯನ್ನು ಗೌರವಿಸಿದ್ದು, ವಿಶೇಷವಾಗಿತ್ತು.
ಬಳಿಕ ನಗರದ ನಕ್ಷತ್ರ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕಾಲೇಜಿನ 20 ಶಿಕ್ಷಕರು, ಉಪನ್ಯಾಸಕರು ಮತ್ತು 6 ಮಂದಿ ಬೋಧಕೇತರರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಕಾಲೇಜಿನಲ್ಲಿ ಅಧ್ಯಯನ ಮಾಡಿದ ಬೇರೆ ರಾಜ್ಯ, ವಿದೇಶದಲ್ಲಿರುವ ಎಲ್ಲ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ವಂದಿಸಲು ಒಟ್ಟುಗೂಡಿದ್ದರು. ಒಟ್ಟು 100 ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ಕಾಲದಲ್ಲಿ ಗುರುಶಿಷ್ಯರ ಬಾಂಧವ್ಯ ಕಡಿಮೆಯಾಗುತ್ತಿದ್ದು, ಅದರ ಮಹತ್ವ ತಿಳಿಸುವ ಉದ್ದೇಶದಿಂದ ನಮ್ಮ ಮಕ್ಕಳು, ಮನೆ ಮಂದಿ ಎಲ್ಲ ನಮ್ಮನ್ನು ತಿದ್ದಿ ತೀಡಿದ ಗುರುಗಳನ್ನು ನೋಡಲಿ ಮತ್ತು ಮಕ್ಕಳಿಗೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕರೂ ಆಗಿರುವ ಹಳೆಯ ವಿದ್ಯಾರ್ಥಿ ಪಂಚಾಕ್ಷರಪ್ಪ ಹೇಳಿದರು.
ಹಳೆಯ ವಿದ್ಯಾರ್ಥಿಗಳಾದ ರಮೇಶ್ವರ, ಕೋರಿ ನಾಗರಾಜ, ಎಚ್.ಅಬ್ದುಲ್, ಮಹೇಶ್, ಮೇಘನಾಥ ಶೆಟ್ಟಿ, ಚಂದ್ರಮೌಳಿ ಸ್ವಾಮಿ, ರಾಜೇಶ್, ಮಂಜುನಾಥ ಗೌಡ, ಮಂಜುನಾಥ ಇದ್ದರು