ಬಳ್ಳಾರಿ: ಈ ದೇಶದಲ್ಲಿ ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿಂದು ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕವ್ಯಕ್ತಿ ಪೂಜೆ ಆಗಬೇಕು. ಆದರೆ, ಭ್ರಷ್ಟರ ಪೂಜೆ ಆಗಬಾರದು. ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಈ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯ ಆಗಬೇಕಿದೆ ಎಂದರು.
ಹಿಂದೆ ಭ್ರಷ್ಟರು, ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇವತ್ತು ಅಂಥಹವರನ್ನ ಹೂವಿನಹಾರ, ತುರಾಯಿಗಳಿಂದ ಅದ್ದೂರಿಯಾಗಿ ಸ್ವಾಗತ ಕೋರುವ ಸ್ಥಿತಿಯಲ್ಲಿ ನಾವಿದ್ದೇವೆ. ಇವತ್ತು ಹಣವಂತರು ಮಾತ್ರ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗಿದೆ. ಎಸಿಬಿ ಜನ ಪ್ರತಿನಿಧಿಗಳ ಅಣತಿಯಂತೆ ನಡೆಯುತ್ತದೆ. ಲೋಕಪಾಲ್ ಬಿಲ್ ಯಾರಿಗೆ ಬೇಕಾಗಿದೆ ಎಂದು ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.