ಬಳ್ಳಾರಿ: ಜಿಲ್ಲೆಯಾದ್ಯಂತ ರೈತರು ಆರ್.ಎನ್.ಆರ್ ಭತ್ತದ ತಳಿಯನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿ ಮತ್ತು ಲಾಭ ಪಡೆದು ಜಿಲ್ಲೆಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಸಿರುಗುಪ್ಪ ಹಾಗು ನಾನಾ ಗ್ರಾಮಗಳಲ್ಲಿ ಈ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ. ಇದು ಸೋನಾ ಮಸೂರಿ ಭತ್ತಕ್ಕೆ ಪರ್ಯಾಯ ಬೆಳೆ ಎಂದೇ ಬಿಂಬಿಸಲಾಗಿದೆ. ಇದು ಸಪ್ಪೆಯಾಗಿರುವ ಕಾರಣ ಮಧುಮೇಹ ಕಾಯಿಲೆ ಇರುವವರೂ ಇದನ್ನು ಸೇವಿಸಬಹುದಾಗಿದೆ. ಹಾಗಾಗಿ ಇದಕ್ಕೆ ಬೇಡಿಕೆಯೂ ಹೆಚ್ಚಾಗಿದೆ.
ಸೋನಾ ಮಸೂರಿ ಬೆಳೆಗೆ ರೋಗಭಾದೆ ಜಾಸ್ತಿ ಅಲ್ಲದೇ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ. ಹೀಗಾಗಿ ದಶಕಗಳ ಕಾಲ ಸೋನಾ ಮಸೂರಿ ಭತ್ತವನ್ನು ಬೆಳೆಯುತ್ತಿದ್ದ ರೈತರು ಈಗ ಆರ್ ಎನ್ ಆರ್ ತಳಿಯ ಭತ್ತ ಬೆಳೆಯಲು ಮುಂದಾಗಿದ್ದಾರೆ.
ಈ ತಳಿಗೆ ಬೇಡಿಕೆಯೂ ಜಾಸ್ತಿಯಂತೆ: ಸೋನಾ ಮಸೂರಿ ಭತ್ತಕ್ಕಿಂತಲೂ ಈ ತಳಿಗೆ ಬಹುಬೇಡಿಕೆ ಇದೆ. ಸೋನಾ ಮಸೂರಿ ಒಂದು ಎಕರೆಯಲ್ಲಿ 30- 35 ಚೀಲ ಇಳುವರಿ ಬಂದರೆ, ಆರ್ ಎನ್ ಆರ್ ಭತ್ತದ ತಳಿಗೆ ಅಂದಾಜು 40-45 ಚೀಲ ಬರುತ್ತದೆ. ಕ್ವಿಂಟಲ್ ಸೋನಾ ಮಸೂರಿಗೆ 1750 ರೂ.ಗಳ ಬೆಲೆ ಇದ್ದರೆ, ಆರ್.ಎನ್.ಆರ್ ತಳಿಗೆ ಅಂದಾಜು 1850 ರೂ.ಗಳ ಧಾರಣೆ ಇರುತ್ತೆ. ಸೋನಾ ಮಸೂರಿಗಿಂತಲೂ 100 ರೂಪಾಯಿ ಹೆಚ್ಚಿರುತ್ತೆ. ತಮಿಳುನಾಡು ಸೇರಿದಂತೆ ಕರ್ನಾಟಕದ ತುಮಕೂರು, ಶಿವಮೊಗ್ಗ ಈ ಭತ್ತವನ್ನು ಮಾರಾಟ ಮಾಡಲಾಗುತ್ತೆ.