ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕು ಭತ್ತದ ಕಣಜವೆಂದೇ ಖ್ಯಾತಿ ಪಡೆದಿದೆ. ತಾಲೂಕಿನಲ್ಲಿ ಓಬಿರಾಯನ ಕಾಲದಿಂದಲೂ ಜಾರಿಯಲ್ಲಿದ್ದ ಭತ್ತ ನಾಟಿ ಪದ್ಧತಿಗೆ ತಿಲಾಂಜಲಿ ಹಾಡಿ, ಕಳೆದ ನಾಲ್ಕು ವರ್ಷಗಳಿಂದ ಕೂರಿಗೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.
ತುಂಗಭದ್ರಾ ಜಲಾಶಯ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಈ ಜಲಾಶಯದ ನೀರಿನ ನೆರವಿನಿಂದ ಪ್ರತಿವರ್ಷ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತನಾಟಿ ಮಾಡಲಾಗುತ್ತೆ. ಆದರೆ, ನಾಟಿ ಪದ್ದತಿ ಅಳವಡಿಸಿಕೊಂಡಿದ್ದರಿಂದ ರೈತರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಯಚೂರು ಕೃಷಿ ವಿಶ್ವವಿದ್ಯಾಲಯವು 2010ರಲ್ಲಿ ಕೂರಿಗೆ ಬಿತ್ತನೆ ಮೂಲಕ ಭತ್ತ ಬಿತ್ತುವ ಕ್ರಮವನ್ನು ಸಂಶೋಧಿಸಿ, ರೈತರಿಗೆ ಈ ಕುರಿತು ತಿಳಿವಳಿಕೆ ನೀಡುತ್ತಿದೆ.
ಇದರ ಭಾಗವಾಗಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಹೊಸಪೇಟೆ, ಹಡಗಲಿ, ಹರಪನಹಳ್ಳಿ ತಾಲೂಕಿನಲ್ಲಿ ಕೂರಿಗೆ ಬಿತ್ತನೆ ಮೂಲಕ ಭತ್ತ ಬಿತ್ತುವ ಕ್ರಮ ಕಳೆದ ನಾಲ್ಕು ವರ್ಷಗಳಿಂದ ಪ್ರಚಲಿತದಲ್ಲಿದೆ. ವರ್ಷದಿಂದ ವರ್ಷಕ್ಕೆ ಈ ಕೂರಿಗೆ ಭತ್ತನಾಟಿ ಕಾರ್ಯ ಹೆಚ್ಚಾಗುತ್ತಿದೆ. 2017ರಲ್ಲಿ 15,000, 2018ರಲ್ಲಿ 20,000, 2019ರಲ್ಲಿ 25,000 ಸಾವಿರ ಎಕರೆಯಲ್ಲಿ ಭತ್ತವನ್ನು ಕೂರಿಗೆ ಮೂಲಕ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕೂರಿಗೆ ಬಿತ್ತನೆ ಮೂಲಕ 20 ಸಾವಿರ ಎಕರೆ ಬಿತ್ತನೆ ಗುರಿಯನ್ನ ಹೊಂದಲಾಗಿದೆ. ಈಗಾಗಲೇ 5 ಸಾವಿರ ಎಕರೆಯಲ್ಲಿ ಕೂರಿಗೆ ಮೂಲಕ ಬಿತ್ತನೆ ಕ್ರಮ ನಡೆದಿದೆ.
ಕೂರಿಗೆ ಕ್ರಮವೇ ಸೂಕ್ತ:
ಭತ್ತದ ಸಸಿ ನಾಟಿ ಮಾಡುವುದರಿಂದ ಎಕರೆಗೆ 18 ರಿಂದ 20 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ. ಮೊದಲು ಬಿತ್ತನೆ ಬೀಜ ನೆನೆಯಿಟ್ಟು, ನಂತರ ಕಾವಿಗೆ ಇಡಬೇಕು. ಬಳಿಕ ಗದ್ದೆಗಳಿಗೆ ಬೀಜ ಎರಚಿ, ಸಸಿ ಮಡಿ ನಿರ್ವಹಣೆ ಕೈಗೊಳ್ಳಬೇಕು. ಆದರೆ, ಕೂರಿಗೆ ಬಿತ್ತನೆಗೆ ಇಷ್ಟೆಲ್ಲ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ಬೀಜದ ಉಳಿತಾಯ ಆಗಲಿದ್ದು, ಸೂಕ್ತ ಸಮಯದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಜೊತೆಗೆ ಮಣ್ಣಿನ ಫಲವತ್ತೆತೆ ಕಾಪಾಡಿಕೊಳ್ಳಬಹುದು. ಸಸಿ ನಾಟಿ ವೆಚ್ಚ ಇರೋದಿಲ್ಲ. ಪ್ರಮುಖವಾಗಿ ಶೇ. 20 ರಿಂದ 40ರಷ್ಟು ನೀರಿನ ಉಳಿತಾಯ ಆಗಲಿದೆ.
ಕಡಿಮೆ ರಸಗೊಬ್ಬರ ಬಳಕೆ
ಕೂರಿಗೆ ಬಿತ್ತನೆಯಿಂದ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗಲಿದೆ. ಭತ್ತವನ್ನು ಬೇಗನೆ ಕಟಾವು ಮಾಡಬಹುದು. ಸೋನಾ ಮಸೂರಿ ಭತ್ತ ಮಾತ್ರ ಜೂನ್ 30ರೊಳಗೆ ಬಿತ್ತನೆ ಮಾಡಬೇಕು ಎಂಬೋದನ್ನು ಬಿಟ್ಟರೆ, ಇನ್ನುಳಿದ ಯಾವುದೇ ತಳಿಯಾದರೂ ಉಳಿದ ಸಮಯದಲ್ಲಿ ಬಿತ್ತನೆ ಮಾಡಬಹುದು.
ಕೂರಿಗೆ ಬಿತ್ತನೆ ಮಾಡಿದ ರೈತರು ಕಳೆನಾಶಕವನ್ನು ಕಡ್ಡಾಯವಾಗಿ ಬಳಸಲೇಬೇಕು. ಪೆಂಡಿಮಿಥಿಲಿನ್ 30 ಇಸಿಯಾದರೆ 4 ರಿಂದ 5 ಎಂಎಲ್ ಅಥವಾ ಪಿಂಡಿಮಿಥಿಲಿನ್ 38.7 ಸಿಎಸ್ 3.5 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳಬೇಕು. ಎಕರೆಗೆ 200 ರಿಂದ 300 ಲೀಟರ್ ಸಿಂಪಡಣಾ ದ್ರಾವಣ ಬೇಕಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಕೂರಿಗೆ ಪದ್ಧತಿ ಮೂಲಕ ಭತ್ತ ಬಿತ್ತನೆಯಿಂದ ರೈತರಿಗೆ ಸಾಕಷ್ಟು ಲಾಭಗಳಿವೆ. ಹೀಗಾಗಿಯೇ ನಾಟಿ ಪದ್ಧತಿ ಬಿಟ್ಟು ಕೂರಿಗೆ ಮೂಲಕ ಬಿತ್ತನೆ ಮಾಡಿ ಎಂದು ಹಲವು ವರ್ಷಗಳಿಂದ ರೈತರಲ್ಲಿ ಮನವಿ ಮಾಡಿಕೊಂಡ ಪರಿಣಾಮ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರೈತರು ಕೂರಿಗೆ ಮೂಲಕ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಎಂ.ಎ.ವಿಭಾಗದ ಮುಖ್ಯಸ್ಥ ಪ್ರೊ.ಬಸವಣ್ಣೆಪ್ಪ ತಿಳಿಸಿದ್ದಾರೆ.
ಕೂರಿಗೆ ಪದ್ಧತಿ ಮೂಲಕ ಭತ್ತ ಬಿತ್ತನೆ ಮಾಡುವುದರಿಂದ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಕ್ರಮ ಅನುಸರಿಸುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಒಟ್ಟಾರೆ, ಅವಳಿ ಜಿಲ್ಲೆಯಲ್ಲಿ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ಬಿತ್ತನೆಯಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಸೋಗಿನಲ್ಲಿ ಕಾಡು ಪ್ರಾಣಿ ಬೇಟೆಗೆ ಹೊಂಚು: ಗನ್ ಸಮೇತ ಐವರ ಬಂಧನ