ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 34ನೇ ವಾರ್ಡ್ನಿಂದ 39ನೇ ವಾರ್ಡ್ಗೆ ಸುಮಾರು 300 ಕ್ಕೂ ಅಧಿಕ ಮತದಾರರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ರಾಜಕೀಯ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀಗೆ ಶಿಫ್ಟ್ ಮಾಡಲಾದ ಎಲ್ಲಾ ಮತದಾರರು ಸದ್ಯಕ್ಕೆ ನೆಲೆಸಿರುವುದು 34ನೇ ವಾರ್ಡ್ನಲ್ಲಿ. ಆದರೆ ಅವರ ಮತದಾನ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿರೋದು ಮಾತ್ರ 39ನೇ ವಾರ್ಡ್ನಲ್ಲಿ. ಹಾಗಾದ್ರೆ ಮತ ಚಲಾವಣೆಗೋಸ್ಕರವೇ ಅಲ್ಲಿಗೆ ಹೋಗಬೇಕಾ?, ಈ ವಾರ್ಡ್ನ ಅಭಿವೃದ್ಧಿ ಕಾರ್ಯಗಳಿಗೆ ಆ ವಾರ್ಡ್ನ ಸದಸ್ಯರು ಯಾವ ರೀತಿಯ ಸ್ಪಂದನೆ ಮಾಡುತ್ತಾರೆ ಎಂಬ ಅನುಮಾನ ಮೂಡಿದೆ. ಕೇವಲ ಕಮ್ಮ ಸಮುದಾಯದ ಮತದಾರರನ್ನೇ ಇಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.
ಈ ಕುರಿತು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕುಡಿತಿನಿ ಶ್ರೀನಿವಾಸ ಆಗ್ರಹಿಸಿದರು.