ಬಳ್ಳಾರಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಹೊರಬಂದಿರುವ ಜನಾರ್ದನ ರೆಡ್ಡಿ ಪಾಲುದಾರತ್ವದ ಕರ್ನಾಟಕದ ಗಡಿಯಲ್ಲಿರುವ ಓಎಂಸಿ ಗಣಿ (ಓಬಳಾಪುರಂ ಮೈನಿಂಗ್ ಕಂಪನಿ) ಗುತ್ತಿಗೆ ಆರಂಭಕ್ಕೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಆಂಧ್ರ ಸರ್ಕಾರ ತಮ್ಮ ತಕರಾರು ಇಲ್ಲ ಎಂದಿರುವುದು ರೆಡ್ಡಿ ಸಹೋದರರ ವಲಯದಲ್ಲಿ ಗಣಿಗಾರಿಕೆ ಆರಂಭಕ್ಕೆ ಆಶಾಭಾವ ಚಿಗುರೊಡೆದಿದೆ.
ಅಕ್ರಮ ಗಣಿಗಾರಿಕೆ ಆರೋಪದ ಸಂದರ್ಭದಲ್ಲಿ ಕರ್ನಾಟಕದ ಗಡಿ ಒತ್ತುವರಿ ಮಾಡಿಕೊಂಡು, ಗುತ್ತಿಗೆ ಪ್ರದೇಶದ ಹೊರಗಡೆ ಗಣಿಗಾರಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಅರಣ್ಯ ಪರವಾನಗಿ (FC- Forest clearence)ಯನ್ನು 2001ರಲ್ಲಿ ಅರಣ್ಯ ಇಲಾಖೆ ಅಮಾನತಿನಲ್ಲಿಟ್ಟಿತ್ತು. ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿಯು ಜಂಟಿ ಸರ್ವೇಗೆ ಸೂಚಿಸಿತ್ತು.
ಅಂತಾರಾಜ್ಯ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಮೂಲಕ ಜಂಟಿ ಸರ್ವೇಗೆ ಸೂಚಿಸಲಾಗಿತ್ತು. ಈ ಸರ್ವೇಯನ್ನು ಮಾಡಿರುವ ಕೇಂದ್ರ ಸರ್ವೇ ಇಲಾಖೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಗಡಿ ಒತ್ತುವರಿಯಾಗಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ. ಹೀಗಾಗಿ ಓಎಂಸಿ ಮೇಲಿನ ಆರೋಪ ತಿಳಿಗೊಂಡು, ಕಂಪನಿಯ ಪಾಲುದಾರ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ತಕರಾರು ಇಲ್ಲ ಎಂದ ಆಂಧ್ರ ಸರ್ಕಾರ: ಸರ್ವೇ ಆಫ್ ಇಂಡಿಯಾದ ವರದಿಯು ಓಎಂಸಿಗೆ ಆರಂಭಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಆಧಾರ ಸಿಕ್ಕಂತಾಗಿದೆ. ಇನ್ನು ಕರ್ನಾಟಕ ಸರ್ಕಾರ ಸರ್ವೇ ವರದಿಯನ್ನು ಒಪ್ಪಿಕೊಂಡಿದೆ. ಈ ಹಿನ್ನೆಲೆ ಜನಾರ್ದನ ರೆಡ್ಡಿ ಪಾಲುದಾರತ್ವದ ಓಎಂಸಿ ಕಂಪನಿಯ ಆರಂಭಕ್ಕೆ ತಮ್ಮ ನ್ಯಾಯವಾದಿ ಮೂಲಕ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ ಓಎಂಸಿ ಆಂಧ್ರಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಅಭಿಪ್ರಾಯ ಕೇಳಿತ್ತು. ಆದರೆ, ಅಲ್ಲಿನ ಸರ್ಕಾರ ಓಎಂಸಿ ಆರಂಭಕ್ಕೆ ತಮ್ಮ ತಕರಾರು ಇಲ್ಲವೆಂದು ಹೇಳಿಕೆ ನೀಡಿರುವ ಹಿನ್ನೆಲೆ ಗಣಿಗಾರಿಕೆ ಆರಂಭ ನಿರೀಕ್ಷೆ ಹೆಚ್ಚಿದೆ. ಆದರೆ ಗಣಿಗಾರಿಕೆ ಆರಂಭಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವೇ ಅಂತಿಮವಾಗಿದೆ.
ಇನ್ನೊಂದೆಡೆ ಅಂತಾರಾಜ್ಯ ಗಡಿ ಒತ್ತುವರಿ ವಿಷಯದಲ್ಲಿ ಆರಂಭದಿಂದಲ್ಲೂ ಹೋರಾಟ ಮಾಡಿಕೊಂಡು ಬಂದಿರುವ ಟಿಎನ್ಆರ್ ಗಣಿ ಗುತ್ತಿಗೆಯ ಟಪಾಲ್ ಗಣೇಶ್, ಯಾವುದೇ ಕಾರಣಕ್ಕೆ ಓಎಂಸಿ ಆರಂಭವಾಗುವುದಿಲ್ಲ. ಸರ್ವೇ ಆಫ್ ಇಂಡಿಯಾದ ಸಮೀಕ್ಷೆ ವರದಿ ಸರಿಯಾಗಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಹಾಕಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮುನ್ನೆಲೆಗೆ ಬಂದ ಗಡಿ ವಿವಾದ: ಜನಾರ್ದನ ರೆಡ್ಡಿಗೆ ಮತ್ತೆ ಶುರುವಾಗುತ್ತಾ ಸಂಕಷ್ಟ?