ಬಳ್ಳಾರಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಬದಲಾವಣೆ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಮತ್ತು ಸರ್ಕಾರ ಒಟ್ಟಾಗಿ ಆಡಳಿತ ಮಾಡುತ್ತಿದೆ. ಈಗ ನಾಯಕತ್ವ ಬದಲಾವಣೆ ಇಲ್ಲ. ಅದನ್ನು ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ. ಅವರು ಏನು ಗೈಡ್ ಮಾಡುತ್ತಾರೋ ನಾವು ಅದನ್ನು ಫಾಲೋ ಮಾಡುತ್ತೇವೆ. ಸಿದ್ದರಾಮಯ್ಯನವರಿಗೆ ಹೇಳಲು ಏನೂ ಇಲ್ಲ. ಈಗ ಏನು ಇದ್ರು ಕಥೆ ಕಟ್ಟಿ ಹೇಳೋದು ಅಷ್ಟೇ, ಸಿದ್ದರಾಮಯ್ಯವರ ಕೆಲಸ, ಅವರ ಮಾತಿನಲ್ಲಿ ಅರ್ಥವಿಲ್ಲ, ಸುಮ್ಮನೇ ರಾಜಕೀಯವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.
ಹಿಂದೆ ಪ್ರಿಯಾಂಕ್ ಖರ್ಗೆ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ್ರು, ನನ್ನ ಬಳಿ ಎಲ್ಲ ದಾಖಲೆ ಇದೆ ಅಂದ್ರು, ಈಗ ಸಿಐಡಿ ನೋಟಿಸ್ ಕೊಟ್ರೆ ಒಂದೂ ಹೇಳಿಕೆ ನೀಡುತ್ತಿಲ್ಲ. ಕಾಂಗ್ರೆಸ್ನವರು ಎಷ್ಟು ಬದ್ಧತೆಯಿಂದ ಹೇಳಿಕೆ ನೀಡುತ್ತಾರೆ ಎಂದು ನೀವೇ ಆಲೋಚನೆ ಮಾಡಿ ಎಂದರು.
ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಕುರಿತು ಮಾತನಾಡಿ, ನಾವೂ, ನಮ್ಮ ಇಲಾಖೆಯವರು ತಕ್ಷಣ ಯುವತಿಯನ್ನು ಭೇಟಿ ಮಾಡಿದ್ದೇವೆ. ನಮ್ಮ ಸರ್ಕಾರ ಆರೋಗ್ಯ ಇಲಾಖೆಯಿಂದ ಏನು ಚಿಕಿತ್ಸೆ ಕೊಡಬೇಕು ಅದನ್ನು ಕೊಡಿಸುತ್ತಿದ್ದೇವೆ. ಇತಂಹ ದುಷ್ಕೃತ್ಯ ಮಾಡಿದ ಕ್ರಿಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಕಾನೂನಾತ್ಮಕವಾಗಿ ಕೊಡುವ ಶಿಕ್ಷೆ ಸಾಲದು. ದುರ್ಜನರಿಗೆ, ದುಷ್ಟ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ. ನಾವು ನ್ಯಾಯಾಲಯಕ್ಕೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣೆ ವರ್ಷದಲ್ಲಿ ರಾಜ್ಯದಲ್ಲೇ ಟಿಕಾಣಿ ಹೂಡಲಿದ್ದಾರೆ ಸುರ್ಜೆವಾಲಾ; ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನಕ್ಕೆ ಒತ್ತು