ಬಳ್ಳಾರಿ: ಭಾರಿ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯು ಇದೀಗ ಕಾಂಗ್ರೆಸ್ ಪಾಲಾಗಿದೆ. ಮುಂದಿನವಾರ ಪಾಲಿಕೆ ಮೇಯರ್ - ಉಪಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದೆ.
ಕಾಂಗ್ರೆಸ್ನಿಂದ 21 ಮಂದಿ ಹಾಗೂ ಭಾರತೀಯ ಜನತಾ ಪಾರ್ಟಿಯಿಂದ 13 ಮಂದಿ ಮತ್ತು 5 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮುನ್ನಡೆಯಲಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿದ 26 ಮಂದಿ ಗೆಲುವು ಸಾಧಿಸಿದ್ದರು. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ 6ಮಂದಿ, ಜೆಡಿಎಸ್ ನಿಂದ ಒಬ್ಬರು, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರು.
ಆದರೀಗ, ಕಾಂಗ್ರೆಸ್ ಪಕ್ಷಕ್ಕೆ ಕೊಂಚಮಟ್ಟಿಗೆ ಹಿನ್ನಡೆಯಾಗಿದೆಯಾದರೂ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿಯಲ್ಲಿ ವಿಲೀನಗೊಂಡಿದ್ದರಿಂದ ಕೊಂಚಮಟ್ಟಿಗೆ ಬಿಜೆಪಿ ಚಿಗುರೊಡೆದಿದೆ. ಇದೀಗ ಕಾಂಗ್ರೆಸ್ ಆಡಳಿತದ ಕಾರ್ಯಾಭಾರ ಶುರುವಾಗಲಿದೆ.
ಹೊಸ ಮುಖಗಳಿಗೆ ಅವಕಾಶ: ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಅತೀ ಚಿಕ್ಕ ವಯಸ್ಸಿನಲ್ಲೇ 22ನೇ ವರ್ಷದ ತ್ರಿವೇಣಿ ಅವರು, ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಸತತ ಮೂರು ಬಾರಿ ಗೆಲುವು ಸಾಧಿಸೋ ಮುಖೇನ ಎಂ.ಗೋವಿಂದರಾಜಲು ಹ್ಯಾಟ್ರಿಕ್ ಗೆಲುವಿನತ್ತ ಮುಖ ಮಾಡಿದ್ದಾರೆ.
ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ ಹೀನಾಯವಾಗಿ ಸೋಲುಂಡಿದ್ದಾರೆ. ಇದರಿಂದ ಶಾಸಕ ಗಾಲಿ ಸೋಮಶೇಖರರೆಡ್ಡಿಯವರಿಗೆ ಭಾರಿ ಮುಖ ಭಂಗವಾಗಿದೆ. ತನ್ನ ಮಗನ ಗೆಲುವಿಗಾಗಿ ಹಣದ ಹೊಳೆಯನ್ನೇ ಹರಿಸಿದ್ದರು. ಆದರೆ, ಎದುರಾಳಿ ಎಂ.ನಂದೀಶ ಅವರ ತೀವ್ರ ಪೈಪೋಟಿ ಗಾಲಿ ಶ್ರವಣಕುಮಾರ ರೆಡ್ಡಿಯವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿರೋದು ವಿಶೇಷ ಗಮನಾರ್ಹ ಸಂಗತಿಯಾಗಿದೆ.
ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ, ಮುಂದಿನ ವಾರದಲ್ಲಿ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಸೇರಿದಂತೆ ಬಾಡಿ ಫಾರ್ಮೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದರು. ಈ ದಿನ ನಡೆದ ಶಾಂತಿಯುತ ಮತ ಎಣಿಕೆ ಕಾರ್ಯಕ್ಕೆ ಶ್ರಮಿಸಿದ ರಾಜಕೀಯ ಪಕ್ಷಗಳ ಮುಖಂಡರಿಗೂ, ಏಜೆಂಟ್ರಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ತಮ್ಮ ಅಭಿನಂದನೆ ತಿಳಿಸಿದ್ದಾರೆ.