ಬಳ್ಳಾರಿ: ನವಜಾತ ಹೆಣ್ಣು ಶಿಶುವಿನ ಮೃತದೇಹವು ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ 2ನೇ ವಾರ್ಡ್ನ ಬೀದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಶಿಶುವನ್ನು ನಾಯಿಗಳು ಎಳೆದಾಡುತ್ತಿರುವುದನ್ನು ನೋಡಿದ ಗ್ರಾಮಸ್ಥರು ನಾಯಿಗಳನ್ನು ಓಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬದುಕಿರುವ ಮಗವನ್ನೇ ಪೋಷಕರು ಬಿಟ್ಟು ಹೋಗಿದ್ದು, ನಾಯಿಗಳು ಎಳೆದಾಡಿದ ಮೇಲೆ ಮೃತ ಪಟ್ಟಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, ನಾವು ನೋಡಿದಾಗ ಮಗು ಮೃತಪಟ್ಟ ಸ್ಥಿತಿಯಲ್ಲಿತ್ತು ಎಂದು ಹೇಳುತ್ತಿದ್ದಾರೆ. ಮಗುವನ್ನು ತಡರಾತ್ರಿಯಲ್ಲಿಯೇ ಬಿಟ್ಟು ಹೋಗಿರಬಹುದೆಂದು ಹೇಳಲಾಗುತ್ತಿದೆ.
ಪತ್ತೆಯಾದ ನವಜಾತು ಶಿಶು ಹೆಣ್ಣು ಆಗಿರುವುದರಿಂದ ಬಿಟ್ಟು ಹೋಗಿದ್ದಾರೋ ಅಥವಾ ಈ ಭಾಗದಲ್ಲಿ ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹೆಚ್ಚಾಗಿರುವುದರಿಂದ ಅನೈತಿಕ ಸಂಬಂಧ ಹಿನ್ನೆಲೆಯಿಂದ ಜನಿಸಿದ ಮಗುವೇ ಎಂಬುದು ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ತಿಳಿಯಲಿದೆ.
ಮಗು ಹುಟ್ಟಿದ ಕೆಲ ಸಮಯದಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ತೋರಣಗಲ್ಲು ಠಾಣೆಯ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುರಸಭೆಯ ಅಧಿಕಾರಿಗಳು ಭೇಟಿ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಹೆತ್ತಾಕೆಗೆ ಬೇಡವಾಯಿತೇ ಶಿಶು.. ಕುಷ್ಟಗಿ ತಾಲೂಕಿನ ತಾವರಗೇರಾ ಚರಂಡಿಯಲ್ಲಿ ನವಜಾತ ಶಿಶು ಪತ್ತೆ