ಬಳ್ಳಾರಿ: ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ಸಂಸದ ವೈ.ದೇವೇಂದ್ರಪ್ಪ ಮತ್ತು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಬಳ್ಳಾರಿ ಕೋಟೆ, ಮಿಂಚೇರಿ ಗುಡ್ಡ, ಸಂಗನಕಲ್ಲು ಬೆಟ್ಟ, ಕನಕ ದುರ್ಗಮ್ಮ ದೇವಸ್ಥಾನ ಹಾಗೂ ಡಾ.ರಾಜಕುಮಾರ್ ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಇದಕ್ಕೆ ಅನುಮತಿ ಮತ್ತು ನಿರ್ದೇಶನ ಹಾಗೂ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು.
ರೋಪ್ ವೇ ಅಥವಾ ಕೇಬಲ್ ಕಾರ್ ನಿರ್ಮಾಣಕ್ಕೆ ಮನವಿ
ಬಳ್ಳಾರಿ ಗುಡ್ಡಕ್ಕೆ ರೋಪ್ ವೇ ಅಥವಾ ಕೇಬಲ್ ಕಾರ್ ನಿರ್ಮಿಸುವುದರಿಂದ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿ ಕೋಟೆಯ ಆಕರ್ಷಕ ಮನಮೋಹಕ ಪ್ರಕೃತಿಯನ್ನು ಸವಿಯುತ್ತಾರೆ. ಈ ಬೆಟ್ಟ ಹತ್ತಲು ಎಲ್ಲ ಪ್ರಾಯದ ಪ್ರವಾಸಿಗರಿಗೆ ಕಷ್ಟವಾಗಿರುತ್ತದೆ. ಆದ್ದರಿಂದ ರೋಪ್ ವೇ ನಿರ್ಮಾಣ ಮಾಡಲು ಬೇಕಾದ ಎಲ್ಲಾ ಅನುಮತಿಯನ್ನು ಕೇಂದ್ರ ಪುರಾತತ್ವ ಇಲಾಖೆಯಿಂದ ನೀಡುವಂತೆ ಕೇಂದ್ರ ಸಚಿವರ ಮುಂದೆ ಮನವಿ ಮಾಡಲಾಯಿತು.
ಬಳ್ಳಾರಿ ಜಿಲ್ಲೆಯ ವಿಭಜನೆಯಿಂದ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ಹಿಂದಿನ ವಿಜಯನಗರ ಸಾಮ್ರಾಜ್ಯದ ಪ್ರಮುಖ ಪುರಾತತ್ವ ಸ್ಥಳಗಳು ಈಗ ಹೊಸದಾಗಿ ರಚಿಸಲಾದ ವಿಜಯನಗರದ ಜಿಲ್ಲೆಗೆ ಸೇರುತ್ತವೆ. ಅದಕ್ಕಾಗಿ ಬಳ್ಳಾರಿ ಮತ್ತು ಸುತ್ತಮುತ್ತಲಿನ ಉಳಿದ ಪ್ರವಾಸಿ ಸ್ಥಳಗಳಿಗೆ ರಸ್ತೆ ಸಂಪರ್ಕ ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದು.
ಅದಕ್ಕಾಗಿ ಪ್ರವಾಸಿಗರನ್ನು ಆಕರ್ಷಿಸಲು ನೂತನ ತಂತ್ರಜ್ಞಾನ ಬಳಸಿಕೊಂಡು ಮತ್ತು ಜಿಲ್ಲೆಯಲ್ಲಿ ಹೊಸ ಪ್ರವಾಸಿ ತಾಣವಾಗಿ ರಚಿಸುವ ಮೂಲಕ ನವೀನ ಮತ್ತು ಆಕರ್ಷಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ಪ್ರವಾಸಿ ಸ್ಥಳಗಳಿಗೆ ಬೇಕಾದ ಅನುಮತಿ ಮತ್ತು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದರು.