ವಿಜಯನಗರ: ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆ ನಗರಸಭೆಯಲ್ಲಿರೋ 35ವಾರ್ಡ್ಗಳ ಪೈಕಿ ಅನೇಕ ವಾರ್ಡ್ಗಳಲ್ಲಿ ಪಾಚಿಗಟ್ಟಿದ ನೀರು ಸರಬರಾಜು ಮಾಡಲಾಗ್ತಿದೆ. ಈ ಕುರಿತು ಹಲವಾರು ಬಾರಿ ನಗರಸಭೆ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ 33ನೇ ವಾರ್ಡ್ನ ಸದಸ್ಯೆ ಲಕ್ಷ್ಮೀ ಪರಗಂಟಿ ಅವರು ಕಲುಷಿತ ನೀರು ತುಂಬಿದ್ದ ಬಾಟಲಿಯನ್ನ ನಗರಸಭೆಯ ಸಾಮಾನ್ಯ ಸಭೆಗೆ ತಂದು ಪ್ರದರ್ಶಿಸುವ ಮೂಲಕ ಆಕ್ರೋಶ ಹೊರಹಾಕಿದರು.
33 ನೇ ವಾರ್ಡ್ನ ಪ್ರತಿ ಮನೆಗೂ ಪಾಚಿಗಟ್ಟಿದ ನೀರು ಸರಬರಾಜಗುತ್ತಿದೆ. ನಾವು ಅಧಿಕಾರಿಗಳಿಗೆ ಹೇಳಿ, ಹೇಳಿ ಸಾಕಾಯ್ತು. ನಮಗೆ ಓಣಿಯಲ್ಲಿ ಜನ ಪ್ರಶ್ನೆ ಮಾಡ್ತಾರೆ, ಶುದ್ಧ ಕುಡಿಯುವ ನೀರು ಸರಬರಾಜು ಯಾವಾಗ ಮಾಡ್ತಿರಾ? ಅಂತ ಹೇಳಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಸೇರಿದಂತೆ ನಗರಸಭೆಯ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕಲುಷಿತ ನೀರು ಬರುವುದನ್ನ ಬಾಟಲಿಯಲ್ಲಿ ತುಂಬಿಕೊಂಡು ಬಂದ ಸದಸ್ಯೆ, ಇಷ್ಟು ಪ್ರಮಾಣದಲ್ಲಿ ನೀರು ಕಲುಷಿತಗೊಂಡಿದೆ. ಜನರು ಇದನ್ನು ಹೇಗೆ ಕುಡಿಯಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ನಗರಸಭೆ ಅಧ್ಯಕ್ಷೆ ಸುಂಕಮ್ಮ ಹಾಗು ಪೌರಾಯುಕ್ತ ಮನೋಹರ್ ಸಮಜಾಯಿಸಿ ನೀಡಲು ಹೋದಾಗ ಕ್ಲಾಸ್ ತೆಗೆದುಕೊಂಡ ಲಕ್ಷ್ಮೀ ಅವರು, ನಮಗೂ ಮಾತನಾಡೋಕೆ ಬರುತ್ತೆ, ನಾವು ಮಹಿಳಾ ಸದಸ್ಯೆಯರು ಅಂತ ಅಸಡ್ಡೆ ತೋರಬೇಡಿ ಅಂತ ಖಡಕ್ ವಾರ್ನಿಂಗ್ ನೀಡಿದ್ರು. ಇವರ ಮಾತಿಗೆ ಇನ್ನೊಬ್ಬ ನಗರಸಭೆ ಸದಸ್ಯೆ ರೋಹಿಣಿ ವೆಂಕಟೇಶ್ ಕೂಡ ಸಾಥ್ ನೀಡಿದ್ರು.
ವಿಜಯನಗರ ಜಿಲ್ಲೆಯಾಗಿ ಘೋಷಣೆಯಾದ ನಂತರ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಆದ್ರೆ, ಕೆಲ ವಾರ್ಡ್ಗಳಲ್ಲಿ ಸಮರ್ಪಕ ಶುದ್ಧ ಕುಡಿಯುವ ನೀರಿಲ್ಲ. ನಮಗೆ ಸಮರ್ಪಕ ಕುಡಿಯುವ ನೀರನ್ನು ನೀಡಿ, ಇಲ್ಲವಾದ್ರೆ ಮುಂದೆ ಸಂಭವಿಸುವ ಸಮಸ್ಯೆಗಳಿಗೆ ನೀವೇ ಜವಾಬ್ದಾರಿ ಅಂತ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ನದಿ ಜೋಡಣೆ ಯೋಜನೆಗೆ ವಿರೋಧ : ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನಕ್ಕೆ ಸಜ್ಜು