ಹೊಸಪೇಟೆ(ವಿಜಯನಗರ): ವಿಜಯನಗರ: ರಾಜ್ಯ ಹಾಗೂ ನೆರೆಯ ಆಂಧ್ರದ ಕೆಲ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ಈ ವರ್ಷ ಅವಧಿಗೆ ಒಂದು ತಿಂಗಳ ಮುನ್ನವೇ ಭರ್ತಿಯಾಗಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾಭದ್ರಾ ಜಲಾಶಯ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನ ನದಿಗೆ ಬಿಡಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಿಂದ 10 ಕ್ರಸ್ಟ್ ಗೇಟ್ ಮೂಲಕ ಇಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಪಾರ ಪ್ರಮಾಣದ ನೀರನ್ನು ನದಿಗೆ ಹೊರ ಬಿಡಲಾಯಿತು. ನದಿಗೆ ನೀರು ಬಿಡುವ ಮುನ್ನ ಟಿವಿ ಡ್ಯಾಮ್ ಕಚೇರಿಯಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಿದರು.
105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 95 ಟಿಎಂಸಿ ನೀರಿನ ಸಂಗ್ರಹವಾಗಿತ್ತು. 82 ಸಾವಿರ ಕ್ಯೂಸೆಕ್ಗೂ ಅಧಿಕ ಒಳಹರಿವು ಇದ್ದು, ನಿತ್ಯ ಸರಾಸರಿ 8 ಟಿಎಂಸಿ ಅಡಿ ನೀರು ಹರಿದು ಬರುತ್ತಿದೆ. ಸದ್ಯ ತುಂಗಭದ್ರ ಜಲಾಶಯದಲ್ಲಿ 1631 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ 2 ಅಡಿ ಅಷ್ಟೇ ಬಾಕಿಯಿದೆ.
ಇನ್ನೂ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾದಂತೆ ಹೆಚ್ಚುವರಿ ನೀರನ್ನ ನದಿಗೆ ಹರಿಬಿಡಲಾಗುತ್ತಿದೆ. ಒಂದು ಲಕ್ಷ ಕ್ಯೂಸೆಕ್ವರೆಗೂ ನೀರು ಬಿಡುವ ಸಾಧ್ಯತೆ ಇದೆ. ಇದರಿಂದ ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಯಾಗಿ ಕಂಪ್ಲಿಯ ಕೋಟೆ ಪ್ರದೇಶದಲ್ಲಿರುವ ಕೆಲ ಮನೆಗಳು ಜಲಾವೃತವಾಗಲಿವೆ. ಜೊತೆಗೆ ಹಂಪಿಯ ನದಿ ಪಾತ್ರದಲ್ಲಿರುವ ಕೆಲ ಸ್ಮಾರಕ, ಮಂಟಪಗಳು ಮುಳುಗಡೆಯಾಗಲಿವೆ. ಅಂತೆಯೇ ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ತುಂಗಾಭದ್ರಾ ಡ್ಯಾಂ ಭರ್ತಿಯಾಗಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿರುವ ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯದತ್ತ ಬರುತ್ತಿದ್ದಾರೆ.
ಓದಿ: ಕಬಿನಿ ಜಲಾಶಯ ತುಂಬಲು ಎರಡೇ ಅಡಿ ಬಾಕಿ... ನದಿ ಪಾತ್ರದ ಜನರಲ್ಲಿ ಭೀತಿ