ಹೊಸಪೇಟೆ (ವಿಜಯನಗರ): ಸರ್ಕಾರಿ ಸೇವೆಗಳಿಗೆ ಸಾರ್ವಜನಿಕರು ಪರದಾಡುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಜಿಲ್ಲೆಯ ವಿಭಜನೆ ಮಾಡಲಾಗಿದೆ. ದೇಹ ಎರಡಾದರೂ ಆತ್ಮ ಒಂದೇ ಎನ್ನುವಂತೆ ಎರಡು ಜಿಲ್ಲೆಯ ಜನರು ಸದಾ ಕಾಲ ಅಣ್ಣ ತಮ್ಮಂದಿರಂತೆ ಬಾಳೋಣ. ಜನರ ಸೇವೆಗಾಗಿ, ಜನರ ಒಳಿತಾಗಾಗಿ ಸರ್ಕಾರ ಶ್ರಮಿಸಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿನ್ನೆ ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ವಿಜಯನಗರದ ಹಿಂದಿನ ಇತಿಹಾಸ, ವೈಭವ ಮತ್ತೆ ಮರಕಳಿಸಲಿ. 35 ವರ್ಷಗಳ ನಿರಂತರ ಹೋರಾಟ ಫಲವಾಗಿ ಜಿಲ್ಲೆ ಉದಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಎಲ್ಲಾ ರೀತಿಯಲ್ಲಿ ಜಿಲ್ಲೆಯ ಅಭಿವೃದ್ದಿಯಾಗಲಿದೆ ಎಂದರು.
'ಜನರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ರಚನೆ':
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್, ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿದ್ದಾರೆ. ಎರಡೂ ಜಿಲ್ಲೆಗಳ ಜನರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ರಚನೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಜಿಲ್ಲೆ ಸಂಪೂರ್ಣ ಬೆಳವಣಿಗೆ ಸರ್ಕಾರ ತನ್ನದೇ ಆದ ನೆರವನ್ನು ನೀಡುತ್ತಿದೆ ಎಂದು ಹೇಳಿದರು.
13ನೇ ಶತಮಾನದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯ ಹಾಕಿದ್ದರು. ಅಲ್ಲಿಂದ ವಿಜಯನಗರವು ಇತಿಹಾಸ ಪುಟದಲ್ಲಿ ತನ್ನದೇ ಆದ ಸ್ಥಾನ ಪಡೆದು ಇಡೀ ದೇಶವೇ ತಿರುಗಿ ನೋಡುವಂತೆ ಆಳ್ವಿಕೆ ಮಾಡಲಾಗಿತ್ತು. ಹೊಸ ಜಿಲ್ಲೆಯ ರಚನೆಯ ಮೂಲನ ವಿಜಯನಗರದ ಗತವೈಭವ ಮರುಕಳಿಸಲಿದೆ ಎಂದರು. ವಿಜಯನಗರ ಆರಂಭದಿಂದ ಜಿಲ್ಲೆಯಾಗುವವರೆಗೆ ನಡೆಸಿದ ಹೋರಾಟವನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಡಾ.ಅಶ್ವತ್ ನಾರಾಯಣ, ವಿ.ಸುನೀಲಕುಮಾರ, ಎನ್.ಮುನಿರತ್ನ, ಭೈರತಿ ಬಸವರಾಜ, ಗೋಪಾಲಕೃಷ್ಣ, ಸಂಸದರಾದ ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ಧೇಶ್ವರ, ಕರಡಿ ಸಂಗಣ್ಣ, ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್, ಎನ್.ವೈ.ಗೋಪಾಲಯ್ಯ ಇನ್ನಿತರರಿದ್ದರು.